Advertisement

ರಾಷ್ಟ್ರೀಯ ಹೆದ್ದಾರಿಯಲ್ಲಿ 5 ತಾಸು ಸಂಚಾರ ಅಸ್ತವ್ಯಸ್ತ

10:32 AM Dec 04, 2018 | |

ವಿಟ್ಲ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಬಳಿಯ ಹಳೀರದಲ್ಲಿ ಸೋಮವಾರ ಲಾರಿಯೊಂದು ಕೆಟ್ಟು ರಸ್ತೆ ಮಧ್ಯೆ ನಿಂತ ಪರಿಣಾಮ ಐದು ತಾಸು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತು.

Advertisement

ಸೋಮವಾರ ಬೆಳಗ್ಗಿನ ಜಾವ 4 ಗಂಟೆಗೆ ಬೆಂಗಳೂರು ಕಡೆಯಿಂದ ಮಂಗಳೂರಿನತ್ತ ಕಬ್ಬಿಣದ ರಾಡ್‌ಗಳನ್ನು ಹೊತ್ತು ಬಂದ ಲಾರಿಯು ಮಾಣಿಯ ಹಳೀರದಲ್ಲಿ ಕೆಟ್ಟು ನಿಂತಿತು. ಬೆಳಗ್ಗೆ 8.30ರ ವರೆಗೆ ಇತರ ವಾಹನಗಳು ಬದಿಯಲ್ಲಿ ತೆರಳುತ್ತಿದ್ದುದರಿಂದ ಸಂಚಾರ ನಿಧಾನವಾಗಿ ಸಾಗುತ್ತಿತ್ತು. ಬಳಿಕ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು.

ಮಧ್ಯಾಹ್ನ ಒಂದು ಗಂಟೆ ವರೆಗೆ ಹೆದ್ದಾರಿ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಲಘು ವಾಹನಗಳು ಹರಸಾಹಸಪಟ್ಟು ತೆರಳಿದರೂ ಘನ ವಾಹನಗಳು ರಸ್ತೆಯಲ್ಲಿಯೇ ಉಳಿದು ಸಾಲು ಬೆಳೆಯಿತು. ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಪರದಾಟ ಅನುಭವಿಸುವಂತಾಯಿತು.

ಮಂಗಳೂರಿಗೆ ಪರೀಕ್ಷೆಗೆ ತೆರಳಬೇಕಾಗಿದ್ದ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ತಲುಪದೆ ತೊಂದರೆ ಅನುಭವಿಸಿದರು. 5 ಆ್ಯಂಬುಲೆನ್ಸ್‌ಗಳು ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡು ರೋಗಿಗಳೂ ಸಮಸ್ಯೆ ಅನುಭವಿಸಿದರು. ಬಳಿಕ ಸ್ಥಳೀಯ ವಾಹನಗಳ ಚಾಲಕರು, ಸಾರ್ವಜನಿಕರು ಆ್ಯಂಬುಲೆನ್ಸ್‌ ಗಳಿಗೆ ದಾರಿ ಮಾಡಿಕೊಟ್ಟರು.

ಮಾಣಿ ಜಂಕ್ಷನ್‌ನಲ್ಲಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಮಾಣಿ-ಮೈಸೂರು ರಾಜ್ಯ
ಹೆದ್ದಾರಿ ಹಾದುಹೋಗುವುದರಿಂದ ಎರಡು ಹೆದ್ದಾರಿಗಳಲ್ಲಿಯೂ  ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಬೆಳಗ್ಗೆ 8 ಗಂಟೆಗೆ ವಿಟ್ಲ ಠಾಣೆಗೆ ಸಾರ್ವಜನಿಕರು ಮಾಹಿತಿ ನೀಡಿದ್ದರೂ 10 ಗಂಟೆಯಾದರೂ ಪೊಲೀಸರು ಅತ್ತ ಸುಳಿಯಲಿಲ್ಲ. ಬಳಿಕ ಬಂಟ್ವಾಳ ಎಎಸ್ಪಿ ಅವರಿಗೆ ಮಾಹಿತಿ ನೀಡಿದ್ದು, ಹೆದ್ದಾರಿ ಗಸ್ತು ವಾಹನ ಸ್ಥಳಕ್ಕೆ ಧಾವಿಸಿತು. ವಿಟ್ಲ ಹಾಗೂ ಬಂಟ್ವಾಳ ಸಂಚಾರ ಪೊಲೀಸರು ಆಗಮಿಸಿ ವಾಹನ ದಟ್ಟಣೆ ನಿವಾರಿಸಲು ಆರಂಭಿಸಿದ್ದರು. ಕೆಟ್ಟು ನಿಂತಿದ್ದ ಲಾರಿಯ ಚಾಲಕ ಕೀಲಿಕೈ ಸಹಿತ ಎಲ್ಲೋ ಹೋಗಿದ್ದರಿಂದ ಕಾರ್ಯಾಚರಣೆಗೆ ಮತ್ತಷ್ಟು ತೊಡಕಾಯಿತು.
ಬಂಟ್ವಾಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುದೀಪ್‌ ಕುಮಾರ್‌ ಶೆಟ್ಟಿ ಅವರು 2 ಜೆಸಿಬಿಗಳನ್ನು ಒದಗಿಸಿ ತಾತ್ಕಾಲಿಕವಾಗಿ ಬದಲಿ ರಸ್ತೆ ಮಾಡಿ ಬಳಿಕ ಕೆಟ್ಟು ನಿಂತ ಲಾರಿಯನ್ನು ಉಪ್ಪಿನಂಗಡಿಯ ಕ್ರೇನ್‌ ಮೂಲಕ ತೆರವುಗೊಳಿಸಿ ಮುಕ್ತ ಸಂಚಾರಕ್ಕೆ ಅನುವು ಮಾಡಿದರು.

Advertisement

ರಾತ್ರಿ ಮತ್ತೆ ಸಮಸ್ಯೆ
ರಾತ್ರಿ ವೇಳೆ ಅದೇ ಸ್ಥಳದಲ್ಲಿ ಮತ್ತೆರಡು ಲಾರಿಗಳು ಕೆಟ್ಟು ನಿಂತು ಸಮಸ್ಯೆಯಾಯಿತು. ವಿಟ್ಲ ಠಾಣಾಧಿಕಾರಿ ಕ್ರೇನ್‌ ಮೂಲಕ ಲಾರಿಗಳನ್ನು ತೆರವುಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next