ಬೆಂಗಳೂರು: ಭಾರತವು ಅಂಧರ ಟ್ವೆಂಟಿ-20 ಕ್ರಿಕೆಟ್ ಕೂಟದ ಫೈನಲ್‌ನಲ್ಲಿ ಪಾಕಿಸ್ಥಾನವನ್ನು ಎದುರಿಸಲಿದೆ. ಈ ಪಂದ್ಯವು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರವಿವಾರ ನಡೆಯಲಿದೆ.
ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ಶನಿವಾರ ನಡೆದ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ಥಾನ ತಂಡವು ಇಂಗ್ಲೆಂಡ್ ತಂಡವನ್ನು 147 ರನ್ನುಗಳಿಂದ ಸೋಲಿಸಿತ್ತು. ಶುಕ್ರವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ಶ್ರೀಲಂಕಾವನ್ನು 10 ವಿಕೆಟ್‌ಗಳಿಂದ ಕೆಡಹಿತ್ತು.
ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನವು ನಿಗದಿತ 20 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟದಲ್ಲಿ 309 ರನ್ನುಗಳ ಬೃಹತ್ ಮೊತ್ತ ಪೇರಿಸಿತ್ತು. ಕಠಿನ ಸವಾಲಿಗುತ್ತರವಾಗಿ ಇಂಗ್ಲೆಂಡ್ 162 ರನ್ನಿಗೆ ಆಲೌಟಾಗಿ ಸೋಲು ಒಪ್ಪಿಕೊಂಡಿತು.
ಇಸ್ರಾರ್ ಹಸ್ಸನ್ ಮತ್ತು ಬಾದರ್ ಮುನೀರ್ ಅವರ ಆಕರ್ಷಕ ಶತಕ ಪಾಕಿಸ್ಥಾನ ಇನ್ನಿಂಗ್ಸ್‌ನ ಆಕರ್ಷಣೆಯಾಗಿತ್ತು. ಬೌಂಡರಿಗಳ ಸುರಿಮಳೆಗೈದ ಅವರಿಬ್ಬರು ಇಂಗ್ಲೆಂಡ್ ದಾಳಿಯನ್ನು ಧ್ವಂಸಗೈದರು. ಹಸ್ಸನ್ ಕೇವಲ 69 ಎಸೆತಗಳಿಂದ 25 ಬೌಂಡರಿ ನೆರವಿನಿಂದ 143 ರನ್ ಗಳಿಸಿ ಅಜೇಯರಾಗಿ ಉಳಿದರೆ ಮುನೀರ್ 43 ಎಸೆತಗಳಿಂದ 103 ರನ್ ಹೊಡೆದರು. ಅವರು 18 ಬೌಂಡರಿ ಬಾರಿಸಿದ್ದರು.
ಆಲೂರು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡ ಮೊದಲು ಬ್ಯಾಟಿಂಗ್ ಮಾಡಿತು. 19.2 ಓವರ್‌ಗಳಲ್ಲಿ 174 ರನ್ನಿಗೆ ಆಲೌಟಾಯಿತು. ಈ ಗುರಿ ಬೆನ್ನಟ್ಟಿದ ಭಾರತ 13 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 175 ರನ್ ಗಳಿಸಿ ಗೆಲುವು ಸಾಧಿಸಿತು. ಭಾರತದ ಪರ ಆರಂಭಿಕರಾದ ಪ್ರಕಾಶ್ ಜಯರಾಮಯ್ಯ (ಅಜೇಯ 115) ಮತ್ತು ಅಜಯ್ ಕುಮಾರ್ ರೆಡ್ಡಿ (ಅಜೇಯ 51) ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.