ಕಾಸರಗೋಡು: ಈ ಬಾರಿಯ ಕೇರಳ ಎಸೆಸೆಲ್ಸಿ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲೂ ಎ ಪ್ಲಸ್ ಗ್ರೇಡ್‌ನಲ್ಲಿ ಉತ್ತೀರ್ಣಳಾಗಿ ರುವ ವಿಷ್ಣುಪ್ರಿಯಾ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಜನ್ಮತಃ ಅಂಧಳಾಗಿಯೂ ಈ ಸಾಧನೆ ಮಾಡಿರುವುದು ವಿಶೇಷ.
ಈಕೆ ಕಾರಡ್ಕ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ. ಶೈಕ್ಷಣಿಕ ಸಾಧನೆ ಮಾತ್ರವಲ್ಲದೆ ಸಂಗೀತದಲ್ಲಿಯೂ ಈಕೆ ನಿಪುಣೆ. ಕುಟುಂಬ ನಿರ್ವಹಣೆಯ ಹೊಣೆಯನ್ನು ವಿಷ್ಣುಪ್ರಿಯಾ ಸಂಗೀತ ತರಗತಿ, ಕಛೇರಿ ನಡೆಸಿ ಬರುವ ಆದಾಯದಲ್ಲಿ ನಿರ್ವಹಿಸುತ್ತಿದ್ದಾಳೆ.
ವಿಷ್ಣುಪ್ರಿಯಾಳ ತಂದೆ ಹೃದ್ರೋಗಿಯಾಗಿದ್ದು, ದುಡಿಯುವ ಸ್ಥಿತಿಯಲ್ಲಿಲ್ಲ. ತಾಯಿ ಬಿಎಡ್ ಪದವೀಧರೆಯಾಗಿದ್ದರೂ ದೃಷ್ಟಿದೋಷದಿಂದಾಗಿ ಉದ್ಯೋಗ ದೊರೆತಿಲ್ಲ. ಅಂಧೆಯಾದ ಕಾರಣ ವಿಳಂಬವಾಗಿ ಶಾಲೆ ಸೇರಿದ್ದರಿಂದ ಸಹೋದರ ಅಭಿಷೇಕ್ ಕೂಡ ವಿಷ್ಣುಪ್ರಿಯಾಳ ಸಹಪಾಠಿಯಾಗಿದ್ದಾನೆ. ಅವನೂ ಎಲ್ಲ ವಿಷಯಗಳಲ್ಲಿ ಎ ಗ್ರೇಡ್ ಗಳಿಸಿದ್ದಾನೆ. ಶಾಲೆಗೆ ಹೋಗುವುದ ರಿಂದ ಹಿಡಿದು ಎಲ್ಲದರಲ್ಲಿಯೂ ಅಕ್ಕನಿಗೆ ತಮ್ಮ ಸಾಥ್ ನೀಡುತ್ತಾನೆ.
ವಿಷ್ಣುಪ್ರಿಯಾ ಮೂರು ಬಾರಿ ಕೇರಳ ರಾಜ್ಯ ಶಾಲಾ ಕಲೋತ್ಸವದಲ್ಲಿ ಶಾಸ್ತ್ರೀಯ ಸಂಗೀತ ಮತ್ತು ಕಥಕ್ಕಳಿ ಸಂಗೀತದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ. ಗುರು ಉಷಾ ಭಟ್ ಜತೆಯಲ್ಲಿ ಹಲವಾರು ಕಡೆ ಕಛೇರಿಗಳನ್ನು ನೀಡಿದ್ದಾಳೆ. ಶಂಕರ ಟಿವಿ ನಡೆಸಿದ ಸಂಗೀತ ಯಾತ್ರೆ, ಫÉವರ್ ಚಾನೆಲ್‌ನ ಕಾಮಿಡಿ ಉತ್ಸವ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದಾಳೆ. ಸಿಸಿಆರ್‌ಟಿ ವಿದ್ಯಾರ್ಥಿವೇತನ ಪಡೆಯುತ್ತಿದ್ದಾಳೆ.
– ವಿದ್ಯಾ ಗಣೇಶ್ ಅಣಂಗೂರು