Advertisement

ಅಪ್ಪನಂತೆ ನನಗೂ ಆಶೀರ್ವಾದಿಸಿ: ಡಾ.ಯತೀಂದ್ರ

01:16 PM May 27, 2017 | Team Udayavani |

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಶೀರ್ವಾದ ಮಾಡಿದಂತೆ ತನಗೂ ಮಾಡಿ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು. ವರುಣ ಕ್ಷೇತ್ರದ ತಾಯೂರು ಗ್ರಾಮ ಪಂಚಾಯ್ತಿ ವತಿಯಿಂದ ಶುಕ್ರವಾರ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಭೂಮಿಪೂಜೆ,

Advertisement

-ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಶೇ. 22.75 ಯೋಜನೆಯಡಿ 6 ಜನ ವಿಧವೆಯವರಿಗೆ ಹೊಲಿಗೆಯಂತ್ರ, 12 ಜನ ಅಂಗವಿಕಲರಿಗೆ ತಲಾ ಒಂದು ಕುರಿ, 4 ಜನ ಅಂಗವಿಕಲರಿಗೆ ವ್ಹೀಲ್‌ಚೇರ್‌, 25 ವಿದ್ಯಾರ್ಥಿಗಳಿಗೆ ಪೋ›ತ್ಸಾಹಧನದ ಚೆಕ್‌ ವಿತರಿಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಹೊಣೆ ಹೊತ್ತಿರುವುದರಿಂದ ತನ್ನನ್ನು ಅವರ ಪ್ರತಿನಿಧಿಯಾಗಿ ಕಳುಹಿಸಿದ್ದಾರೆ. ಜನರ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬಗೆಹರಿಸಿಕೊಡುತ್ತೇನೆ. ಸಿದ್ದರಾಮಯ್ಯ ಅವರಿಗೆ ಆಶೀರ್ವಾದ ಮಾಡಿದಂತೆ ತನಗೂ ಆಶೀರ್ವದಿಸಿ ಎಂದು ಕೋರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಹಗರಣ, ಭ್ರಷ್ಟಾಚಾರವಿಲ್ಲದೆ ಸುಭದ್ರ ಆಡಳಿತ ನೀಡಿದೆ ಎಂದು ವರುಣ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ದೇಶದಲ್ಲಿಯೇ ಮೊದಲ ಬಾರಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಜನಸಂಖ್ಯೆಗೆ ಅನುಗುಣವಾಗಿ ಕಾಯ್ದೆ ರೂಪಿಸಿ 4 ವರ್ಷದಲ್ಲಿ 80 ಸಾವಿರ ಕೋಟಿ ರೂ.ಗಳನ್ನು ಕಾಂಗ್ರೆಸ್‌ ಸರ್ಕಾರ ಖರ್ಚು ಮಾಡಿದೆ. ಕರ್ನಾಟಕದ ಇತಿಹಾಸದಲ್ಲಿ ಇದುವರೆಗೂ ಯಾವ ಸರ್ಕಾರಗಳು ನೀರಾವರಿಗೆ ಖರ್ಚು ಮಾಡದಷ್ಟು 60 ಸಾವಿರ ಕೋಟಿ ರೂ.ವ್ಯಯಿಸಿದೆ.  

Advertisement

ತಾಯೂರು ಗ್ರಾಮಕ್ಕೆ ಈಗ 93 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿದೆ. 30 ಲಕ್ಷ ರೂ.ಗಳನ್ನು ಸಿದ್ದರಾಮೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದೆ. ಉಳಿದ ರಸ್ತೆಗಳಿಗೆ 50 ಲಕ್ಷ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಒಟ್ಟಾರೆಯಾಗಿ ಎಲ್ಲಾ ವರ್ಗದ ಜನರ ಬೀದಿಗಳ ರಸ್ತೆಗಳನ್ನು ಈ ವರ್ಷದೊಳಗೆ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಎಂ. ರಾಮಯ್ಯ ಮಾತನಾಡಿ, ಮುಖ್ಯಮಂತ್ರಿಗಳು ರಾಜ್ಯದ ಉಸ್ತುವಾರಿ ನೋಡಿಕೊಳ್ಳುತ್ತಿರುವುದರಿಂದ ಕ್ಷೇತ್ರಕ್ಕೆ ಡಾ.ಯತೀಂದ್ರರನ್ನು ಕಳುಹಿಸಿದ್ದಾರೆ. ಯತೀಂದ್ರ 6 ತಿಂಗಳಿಂದ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದಾರೆ, ಸರಳ-ಸಜ್ಜನ ವ್ಯಕ್ತಿ, ಜನರಿಗೆ ಸ್ಪಂದಿಸುವ ವ್ಯಕ್ತಿತ್ವವಿದೆ. 2018ರ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವ ಸಾಧ್ಯತೆಯಿದೆ. ಅವರ ಮೇಲೆ ನಿಮ್ಮ ಆಶೀರ್ವಾದವಿರಲಿ ಎಂದು ಮನವಿ ಮಾಡಿದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷ ಸಂತೋಷ್‌, ಪಿಡಿಒ ಪವಿತ್ರ, ನಂಜನಗೂಡು ತಾಪಂ ಇಒ ರೇವಣ್ಣ, ಎಇಇ ಯೋಗೇಂದ್ರ, ಮುಖಂಡರಾದ ರಂಗಸ್ವಾಮಿ, ಲಾರಿಸ್ವಾಮಿ, ಶಿವನಾಗ, ಮಲ್ಲುಪುರ ಪ್ರಕಾಶ್‌, ಮರಳೂರು ಮಹೇಶ್‌ಕುಮಾರ್‌, ಚಿನ್ನಸ್ವಾಮಿ, ಶಿವಣ್ಣ, ಈಶ್ವರಗೌಡನಹಳ್ಳಿ ರೇವಣ್ಣ, ಕೃಷ್ಣ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next