ಹುಬ್ಬಳ್ಳಿ: ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ, ಹು.ಧಾ. ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು.
ಇಲ್ಲಿನ ವಾರ್ಡ್ 54ರ ಗೋಕುಲ, ಉಣಕಲ್ಲ, ಹೆಗ್ಗೇರಿ, ರಾಜಧಾನಿ ಕಾಲೊನಿ ಇನ್ನಿತರೆ ಕಡೆ ಮತ ಪ್ರಚಾರ ಕೈಗೊಂಡ ಅವರು, ರಾಜಕಾಲುವೆಗಳ ಅಭಿವೃದ್ಧಿ ಜತೆಗೆ ರಾಜಕಾಲುವೆ ಎರಡು ಬದಿಯಲ್ಲಿ ತಡೆಗೋಡೆಗಳನ್ನು ನಿರ್ಮಿಸಲಾಗಿದ್ದು, ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪನೆ, ಗ್ರೀನ್ ಕಾರಿಡಾರ್‌ನ್ನು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಕೈಗೊಳ್ಳಲಾಗಿದೆ. ಗ್ರೀನ್ ಕಾರಿಡಾರ್ ಮಾದರಿ ಯೋಜನೆಯಾಗಿದ್ದು, ರಾಷ್ಟ್ರದ ಗಮನ ಸೆಳೆದಿದೆ ಎಂದರು.
ಹುಬ್ಬಳ್ಳಿ-ಧಾರವಾಡ ತೀವ್ರವಾಗಿ ಬೆಳವಣಿಗೆ ಕಾಣುವ ನಗರವಾಗಿದೆ. ಅದಕ್ಕೆ ಪೂರಕವಾಗಿ ಅಗತ್ಯ ಮೂಲಸೌಕರ್ಯಗಳ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಹೆಗ್ಗೇರಿ, ರಾಜಧಾನಿ ಕಾಲೊನಿ, ವಿಕಾಸ ನಗರ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಕ್ಷೇತ್ರದ ಇನ್ನಷ್ಟು ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ನಿಟ್ಟಿನಲ್ಲಿ ನನಗೆ ಮತ್ತೂಮ್ಮೆ ಆಶೀರ್ವದಿಸುವಂತೆ ಮತದಾರರಿಗೆ ಮನವಿ ಮಾಡಿದರು.
ಪ್ರೋಬಸ್ ಕ್ಲಬ್ ಸದಸ್ಯರಿಗೆ ಮನವಿ: ರಾಜಧಾನಿ ಕಾಲೊನಿಯಲ್ಲಿ ಪ್ರಚಾರ ಕೈಗೊಂಡ ಜಗದೀಶ ಶೆಟ್ಟರ ಅವರು ಪ್ರೋಬಸ್ ಕ್ಲಬ್ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಮತಯಾಚನೆ ಮಾಡಿದರು. ಕ್ಷೇತ್ರದ ಜನರ ಹಿತದೃಷ್ಟಿಯಿಂದ ಸದಾ ಶ್ರಮಿಸುತ್ತ ಬಂದಿದ್ದೇನೆ, ಮುಂದೆಯೂ ಈ ಸೇವೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.