ಇಂಡಿ: ಮುಂಗಾರು ತಿಂಗಳು ಕಳೆದರೂ ತಾಲೂಕಿನಲ್ಲಿ ಮಳೆಯಾಗಿಲ್ಲ. ಒಣಗಾಳಿ ಬೀಸುತ್ತಿದ್ದು, ರೈತರು ಆತಂಕಗೊಳ್ಳುವಂತೆ ಮಾಡಿದೆ. ರೈತರು ಭೂಮಿಯನ್ನು ಹದಗೊಳಿಸಿ ಬಿತ್ತನೆಗೆ ಸಿದ್ಧರಾಗಿದ್ದು, ಮಳೆರಾಯನ ದಾರಿ ಕಾಯುತ್ತ ಕುಳಿತಿದ್ದಾರೆ. ಕೃಷಿ ಇಲಾಖೆಯಿಂದ ದೊರೆಯುವ ಸಹಾಯಧನದ ಬೀಜ ಖರೀದಿಗಾಗಿ ರೈತ ಸಂಪರ್ಕ ಕೇಂದ್ರಗಳಿಗೆ ಮುಬಿದ್ದಿದ್ದಾರೆ. ತೊಗರಿ, ಹೆಸರು, ಉದ್ದು, ಸಜ್ಜೆ, ಮೆಕ್ಕೆಜೋಳ ಸೇರಿದಂತೆ ಇತರೆ ಬೀಜ ಬಿತ್ತನೆ ಮಾಡಲು ಸರದಿಯಲ್ಲಿ ನಿಂತು ಬೀಜ ಖರಿಸಿದ್ದರು. ಅಲ್ಲದೆ ಕೆಲ ರೈತರು ಬಿತ್ತನೆ ಸಹ ಮಾಡಿದ್ದರು. ಈಗ ಮಳೆ ಬಾರದೆ ಇರುವುದರಿಂದ ರೈತರು ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆಯುತ್ತಲೆ ಕಮರುತ್ತಿವೆ. ಬರೀ ಮೋಡಕವಿದ ವಾತಾವರಣವಿದೆ. ಭೂಮಿ ಉಳುಮೆ ಮಾಡಿ ಹದಗೊಳಿಸಿದ್ದ ರೈತನ ಬಾಳಿಗೆ ತಣ್ಣಿರು ಎರಚಿದಂತಾಗಿದೆ. ಬಿತ್ತನೆ ಮಾಡಿದ ರೈತರು ಹಾಗೂ ಇನ್ನೂ ಬಿತ್ತನೆ ಮಾಡಬೇಕೆಂದು ಹೊಲ ಸಿದ್ಧ ಮಾಡಿಕೊಂಡ ತಾಲೂಕಿನ ರೈತ ಸಮುದಾಯ ಚಿಂತಾಕ್ರಾಂತದಲ್ಲಿ ಮುಳುಗಿದೆ.
ತಾಲೂಕಿನಲ್ಲಿ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಸಮರ್ಪಕವಾಗಿ ಮಳೆಯಾದ ಬಗ್ಗೆ ಉದಾಹರಣೆಗಳಿಲ್ಲ. ಸರಕಾರ ಮುಂಜಾಗ್ರತ ಕ್ರಮ ಕೈಗೊಳ್ಳ ಬೇಕಾಗಿರುವುದರಿಂದ ಮೋಡ ಬಿತ್ತನೆಯಂತ ಕಾರ್ಯಕ್ರಮ ಅಳವಡಿಸಿಕೊಂಡಲ್ಲಿ ಈ ಭಾಗದ ರೈತರಿಗೆ ಅನುಕೂಲವಾಗಬಹುದು ರೈತ ಈ ದೇಶದ ಬೆನ್ನೆಲುಬಾಗಿದ್ದು, ಯಾವುದೆ ಕಾರಣಕ್ಕೂ ಎದೆಗುಂದಬಾರದು. ಸರಕಾರ ನಿಮ್ಮ ಜೊತೆಗಿದೆ. ಆಲಮಟ್ಟಿ ಆಣೆಕಟ್ಟು ನಿಗದಿತ ಪ್ರಮಾಣದಲ್ಲಿ ನೀರು
ಭರ್ತಿಯಾಗಿಲ್ಲ. ಆದರೂ ಭರ್ತಿಯಾಗುವ ನಿರಿಕ್ಷೆಯಲ್ಲಿದ್ದೇವೆ. ಮುಂಬರುವ ಐಸಿಸಿ ಸಭೆಯಲ್ಲಿ ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಸರಕಾರದ ಮೇಲೆ ಒತ್ತಡ ತರಲಾಗುವುದು.
ಯಶವಂತರಾಯಗೌಡ ಪಾಟೀಲ. ಶಾಸಕರು.
ರೈತರಿಗೆ ಬೇಕಾಗುವ ಬೀಜ ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ರೈತರಿಗೆ ತೊಂದರೆಯಾಗದಂತೆ
ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ತೊಗರಿ ಬೀಜದ ಬೇಡಿಕೆ ಇದೆ. ಅದನ್ನು ಕೂಡಾ ತ್ವರಿತವಾಗಿ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಸಮರ್ಪಕ ಮಳೆಯಾಗದೆ ಇರುವುದರಿಂದ ರೈತರು ಬಿತ್ತನೆ ಸ್ಥಗಿತಗೊಳಿಸಿದ್ದಾರೆ.
ಮಹಾದೇವಪ್ಪ ಏವೂರ, ಸಹಾಯಕ ಕೃಷಿ ನಿರ್ದೇಶಕರು.
ಮಳೆ ಪ್ರಮಾಣ ಪ್ರಸ್ತುತವಾಗಿ ಮುಂಗಾರು ಬಿತ್ತನೆ ಹಂಗಾಮಿಗೆ ವಾಡಿಕೆಯ ಮಳೆ ಸರಾಸರಿ 102.00 ಎಂ.ಎಂ ಮಳೆ ಆಗಬೇಕಾಗಿತ್ತು. ಆದರೆ 84.17 ಎಂ.ಎಂ ರಷ್ಟು ಮಾತ್ರ ಮಳೆ ಬಂದಿದೆ. ಹೀಗಾಗಿ ಬಿತ್ತನೆಗೆ ಬೇಕಾದ ಪ್ರಮಾಣದಲ್ಲಿ ಮಳೆಯಾಗದೆ ಇರುವುದರಿಂದ ಕೇವಲ ಶೇಕಡಾ 8.8ರಷ್ಟು ಮಾತ್ರ ಬಿತ್ತನೆಯನ್ನು ರೈತರು ಅಲ್ಲಲ್ಲಿ ಕೆಲವು ಭಾಗಗಳಲ್ಲಿ ಮಾಡಿದ್ದಾರೆ.
ಕಡಿಮೆ ಪ್ರಮಾಣದಲ್ಲಿ ಮಾರಾಟ ಇಂಡಿ, ಬಳ್ಳೊಳ್ಳಿ ಹಾಗೂ ಚಡಚಣ ರೈತ ಸಂಪರ್ಕ ಕೇಂದ್ರದದಿಂದ ತೊಗರಿ 585 ಕ್ವಿಂಟಲ್ ಬೀಜ ದಾಸ್ತಾನು ಮಾಡಲಾಗಿದೆ. ಹೆಸರು 24ಕ್ವಿಂಟಲ ದಾಸ್ತಾನಾಗಿದ್ದು, ಇದರಲ್ಲಿ ಒಟ್ಟು 12 ಕ್ವಿಂಟಲ್ ಮಾತ್ರ ಮಾರಾಟವಾಗಿದೆ. ಉದ್ದು 6 ಕ್ವಿಂಟಲ್‌ನಲ್ಲಿ 3.50 ಕ್ವಿಂಟಲ್ ಮಾತ್ರ ಮಾರಾಟವಾಗಿದೆ. ಮೆಕ್ಕೆಜೋಳ 244 ಕ್ವಿಂಟಲ್ ದಾಸ್ತಾನನಲ್ಲಿ ಕೇವಲ 76 ಕ್ವಿಂಟಲ್ ಮಾತ್ರ ಮಾರಾಟವಾಗಿದೆ. ಸೂರ್ಯಕಾಂತಿ 25 ಕ್ವಿಂಟಲ್ ದಾಸ್ತಾನಿನಲ್ಲಿ 8 ಕ್ವಿಂಟಲ್ ಮಾತ್ರ ಮಾರಾಟವಾಗಿದೆ. ಸಜ್ಜೆ 48 ಕ್ವಿಂಟಲ್ ದಾಸ್ತಾನನಲ್ಲಿ ಕೇವಲ 15.5 ಕ್ವಿಂಟಲ್ ಮಾತ್ರ ಮಾರಾಟವಾಗಿದೆ.