ವಿಜಯಪುರ: ದೇಶದಲ್ಲಿ 2020ನೇ ಸಾಲಿನಲ್ಲಿ ಟೈಮ್ಸ್ ಎಂಜನಿಯರಿಂಗ್ ಸಂಸ್ಥೆ ನಡೆಸಿದ ಎಂಜಿನಿಯರಿಂಗ್ ಕಾಲೇಜುಗಳ ಸಮೀಕ್ಷೆಯಲ್ಲಿ ವಿಜಯಪುರ ಬಿಎಲ್‌ಡಿಇ ಸಂಸ್ಥೆ ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು ರಾಷ್ಟ್ರೀಯ ರ್‍ಯಾಂಕ್ ನಲ್ಲಿ 53ನೇ ಸ್ಥಾನ ಪಡೆದುಕೊಂಡಿದೆ.
ಈ ಕುರಿತು ಪ್ರಕಟಣೆ ನೀಡಿರುವ ಪ್ರಾಚಾರ್ಯ ಡಾ| ಅತುಲ್ ಆಯರೆ, ಸಮೀಕ್ಷೆಯಲ್ಲಿ ದೇಶದ ಮೊದಲ 100 ಶ್ರೇಷ್ಠ ಕಾಲೇಜುಗಳ ಪಟ್ಟಿಯಲ್ಲಿ ನಮ್ಮ ಕಾಲೇಜು 53ನೇ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ ಎಂದರು.
ವಿವಿಧ ಕಾಲೇಜುಗಳ ಮೂಲಭೂತ ಸೌಕರ್ಯಗಳು, ತಂತ್ರಜ್ಞಾನದ ಅನುಭವ, ಸಂಶೋಧನಾ ಯೋಜನೆಗಳು, ಬೋಧನಾ ಸಲಕರಣೆಗಳಗಳ ಕುರಿತು ತನ್ನ ಸಮೀಕ್ಷೆಯಲ್ಲಿ ಪರಿಗಣನೆ ಮಾಡಿದೆ. ಪದವಿ ವಿದ್ಯಾರ್ಥಿಗಳ ಸಂಶೋಧನೆಯನ್ನು ರ್‍ಯಾಂಕಿಂಗ್ ಪರಿಗಣನೆಯಲ್ಲಿ ಆದ್ಯತೆ ನೀಡಲಾಗಿದೆ.
ಗ್ರಾಮೀಣ ಪರಿಸರ ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಬಿಎಲ್‌ಡಿಇ ಸಂಸ್ಥೆಯ ಈ ಕಾಲೇಜಿನಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಜಗತ್ತಿನ ಪ್ರಸಿದ್ಧ 500 ಕಂಪನಿಗಳ ವಿವಿಧ ಹುದ್ದೆಗಳಲ್ಲಿ ಕರ್ತವ್ಯದಲ್ಲಿದ್ದಾರೆ. ತನ್ನ ಗುಣಮಟ್ಟದ ಶಿಕ್ಷಣ ನೀಡಿಕೆಯಿಂದಾಗಿ ಈ ರ್‍ಯಾಂಕಿಂಗ್ ದೊರೆಯಲು ಕಾರಣವಾಗಿದೆ. 1985ರಲ್ಲಿ ಆರಂಭಗೊಂಡು ಕಳೆದ 35 ವರ್ಷಗಳಿಂದ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುವತ್ತ ಸತತ ಪರಿಶ್ರಮಿಸಿದೆ. ಇದಕ್ಕಾಗಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದ ಪರಿಶ್ರಮ ಪ್ರಮುಖ ಪಾತ್ರ ವಹಿಸಿದೆ ಎಂದು ವಿವರಿಸಿದ್ದಾರೆ. ತಮ್ಮ ಕಾಲೇಜಿನ ಸಾಧನೆಗೆ ಬಿಎಲ್ ಡಿಇ ಅಧ್ಯಕ್ಷರಾದ ಶಾಸಕ ಡಾ| ಎಂ.ಬಿ. ಪಾಟೀಲ ಹರ್ಷವ್ಯಕ್ತಪಡಿಸಿದ್ದಾರೆ.