ಜಕಾರ್ತಾ: ಬೆಂಗಳೂರಿನ ಎಂಇಜಿ (ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್) ಸೈನಿಕ ಬ್ಲೇಡರ್ ರನ್ನರ್ ಆನಂದ್ ಗುಣಶೇಖರನ್ ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇವರು 200 ಮೀ. ಪುರುಷರ ಟಿ44/62/64 ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಆದರೆ ಕೊನೆಯ ಹಂತದಲ್ಲಿ ಅವರು ಕಂಚಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಯಾರಿವರು ಆನಂದನ್?
ಆನಂದ್ ಗುಣಶೇಖರ್ ಮೂಲತಃ ತಮಿಳು ನಾಡಿನವರು. ಭಾರತೀಯ ರಕ್ಷಣಾ ವಿಭಾಗದಲ್ಲಿ ಉದ್ಯೋಗ ನಿಮಿತ್ತ ಕಳೆದ ಕೆಲವು ವರುಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಹಾಗೂ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ದಲ್ಲಿ ತರಬೇತಿ ಪಡೆದಿದ್ದಾರೆ.
ಬಾಂಬ್ ಸ್ಫೋಟಕ್ಕೆ ಆನಂದನ್ ಕಾಲ್ ಕಟ್: 2008ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಲೈನ್ ಆಫ್ ಕಂಟ್ರೋಲ್ (ಎಲ್‌ಒಸಿ)ನಲ್ಲಿ ಆನಂದ್ ಗುಣಶೇಖರನ್ ಸಹ ಸೈನಿಕರೊಂದಿಗೆ ಪಹರೆ ನಡೆಸುತ್ತಿದ್ದರು. ತಮ್ಮ ತಂಡದ ಜತೆಗೆ ಮುಂದೆ ಸಾಗಬೇಕು ಎನ್ನುವಷ್ಟರಲ್ಲಿ ಭಯೋತ್ಪಾದಕರು ಹುದುಗಿಸಿಟ್ಟಿದ್ದ ಬಾಂಬ್ ಸ್ಫೋಟಕ್ಕೆ ಆನಂದನ್ ಅವರ ಎಡಗಾಲು ಸ್ಫೋಟಕ್ಕೆ ಸಿಲುಕಿ ನುಚ್ಚು ನೂರಾಗಿತ್ತು. ಕಾಲು ಕಳೆದುಕೊಂಡ ಆನಂದನ್ ಸೋತು ತಲೆ ಕೆಡಿಸಿಕೊಂಡು ಕೂರಲಿಲ್ಲ. ಛಿದ್ರವಾದ ಕಾಲಿಗೆ ಕೃತಕ ಕಾಲು ಕಟ್ಟಿಕೊಂಡರು. ಬ್ಲೇಡ್ ರನ್ನರ್ ಆಗಿ ಬದಲಾದರು. ಹಲವಾರು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ತನ್ನ ಸಾಮರ್ಥ್ಯವನ್ನು ತೋರಿಸಿದರು.