ಬೆಂಗಳೂರು: ಜೈಲಿನಲ್ಲಿದ್ದುಕೊಂಡೇ ಸಹಚರರ ಸಹಾಯದಿಂದ ಪರಿಚಿತ ಮಹಿಳೆಯ ನಗ್ನ ಫೋಟೋಗಳನ್ನು ಮಾರ್ಫ್ ಮಾಡಿ ಆಕೆಯ ತಾಯಿಯಿಂದ ಹಣ ಪೀಕುತ್ತಿದ್ದ ರೌಡಿಶೀಟರ್ ಸೇರಿ ಮೂವರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಜೈಲಿನಲ್ಲಿದ್ದ ಮನೋಜ್ ಅಲಿಯಾಸ್ ಕೆಂಚನನ್ನು ಬಾಡಿ ವಾರೆಂಟ್ ಮೇಲೆ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಂಚನಿಗೆ ಸಹಾಯ ಮಾಡಿದ್ದ ಯೋಗೇಶ್ ಹಾಗೂ ಸುಭಾಶ್ ಎಂಬುವವರನ್ನು ಬಂಧಿಸಲಾಗಿದೆ.
ರೌಡಿ ಮನೋಜ್ ಅಲಿಯಾಸ್ ಕೆಂಚ ಪರಿಚಿತ ವಿವಾಹಿತ ಮಹಿಳೆಯೊಬ್ಬಳ ಮಾರ್ಫ್ ಮಾಡಿರುವ ಬೆತ್ತಲೆ ಫೋಟೋ ಇಟ್ಟುಕೊಂಡು ಸಂತ್ರಸ್ತೆಯ ತಾಯಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಕಳೆದ ವರ್ಷ ಆಗಸ್ಟ್ ನಲ್ಲಿ ರೌಡಿ ಮನೋಜ್ ಹಾಗೂ ಇತರ ಬಂಧಿತರು ಯುವತಿಯ ತಾಯಿಗೆ ಈ ಅಶ್ಲೀಲ ಫೋಟೋ ಕಳುಹಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದರು. ದುಡ್ಡು ಕೊಡದಿದ್ದರೆ ಯುವತಿಯ ನಗ್ನ ಫೋಟೋವನ್ನು ಆಕೆಯ ಪತಿಗೆ ಕಳುಹಿಸುವುದಾಗಿ ಮನೋಜ್ ಬೆದರಿಸಿದ್ದ. ಇದರಿಂದ ಆತಂಕಗೊಂಡ ಮಹಿಳೆ ತಾಯಿಯು ರೌಡಿಗೆ 40 ಸಾವಿರ ರೂ. ನೀಡಿದ್ದರು.
ಇಷ್ಟಕ್ಕೆ ಸುಮ್ಮನಾಗದೇ ಫೆ.9ರಂದು ಮತ್ತೆ ಮನೋಜ್ ಸಹಚರ ರೌಡಿ ಕಾರ್ತಿಕ್ ಎಂಬಾತ ಮಹಿಳೆಗೆ ಮತ್ತೆ 5 ಲಕ್ಷ ರೂ. ಬೇಡಿಕೆಯಿಟ್ಟಿದ್ದ. ಫೆ.12ರಂದು ರೌಡಿ ಮನು ಜೈಲಿನಿಂದಲೇ ಕರೆ ಮಾಡಿ ಮಹಿಳೆಗೆ ಧಮಕಿ ಹಾಕಿದ್ದ. ಈ ಬಗ್ಗೆ ಸಂತ್ರಸ್ತ ಮಹಿಳೆಯ ತಾಯಿ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸರು ಸಿಸಿಬಿಗೆ ಪ್ರಕರಣ ವರ್ಗಾವಣೆ ಮಾಡಿದ್ದರು.
ಸದ್ಯ ರೌಡಿ ಮನೋಜ್‌ನನ್ನು ಸಿಸಿಬಿ ಪೊಲೀಸರು ಜೈಲಿನಿಂದ ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆದಿದ್ದಾರೆ. ಇದಕ್ಕೆ ಸಹಕಾರ ನೀಡಿದ್ದ ಇತರ ಆರೋಪಿಗಳಾದ ಯೊಗೇಶ್, ಸುಭಾಶ್‌ನನ್ನು ಬಂಧಿಸಲಾಗಿದೆ. ಆರೋಪಿಗೆ ಸಾಥ್ ನೀಡಿದ್ದ ಮಹಿಳೆಯೊಬ್ಬಳನ್ನು ಸಹ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.