ಮಂಡ್ಯ: ಜಿಲ್ಲಾಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಆ್ಯಂಬುಲೆನ್ಸ್ ಕೇಸ್ ವರ್ಕರ್ ಆಗಿ ಕೆಲಸ ಮಾಡುತ್ತಿರುವ ನೌಕರರೊಬ್ಬರನ್ನು ಬ್ಲಾಕ್‌ಮೇಲ್ ಮಾಡಿ ಚಿನ್ನ, ನಗದು ಹಣ ಕಸಿದುಕೊಂಡಿದ್ದಾರೆ ಎಂದು ಆರೋಪಿಸಿ ಮಳವಳ್ಳಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಗಂಗಾಧರ್ ಮತ್ತು ಅವರ ತಂಡದ ವಿರುದ್ಧ ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಐಜಿಪಿಗೆ ದೂರು ನೀಡಲಾಗಿದೆ.
ನಗರದ ಬಂದೀಗೌಡ ಬಡಾವಣೆಯ ಎಸ್.ಶರತ್ ದೂರು ನೀಡಿರುವ ನೌಕರ. ತಮ್ಮಿಂದ 1 ಮಾಂಗಲ್ಯ ಸರ, 1 ಚಿನ್ನದ ಉಂಗುರ, 23 ಸಾವಿರ ರೂ.ಕಸಿದುಕೊಂಡಿರುವ ಪೊಲೀಸರ ತಂಡ, ಇನ್ನೂ 100 ಗ್ರಾಂ ಚಿನ್ನ, 6 ಉಂಗುರ ಹಾಗೂ 80 ಲಕ್ಷ ರೂ.ಕೊಡುವಂತೆ ಬೇಡಿಕೆ ಇಟ್ಟು ಪೀಡಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣವೇನು?: ಮೇ 5 ರಂದು ತಾವು ಕರ್ತವ್ಯ ನಿರತನಾಗಿದ್ದ ಜಿಲ್ಲಾಸ್ಪತ್ರೆ ಕೊಠಡಿಗೆ ಬಂದ ಪೊಲೀಸ್ ಪೇದೆ ಸಿದ್ದರಾಜು,ತಮ್ಮನ್ನು ಪಿಎಸ್‌ಐ ಗಂಗಾಧರ್ ಕರೆಯುತ್ತಿದ್ದಾರೆಂದು ಹೇಳಿ ಪೊಲೀಸ್ ವಾಹನದಲ್ಲಿ ಮಳವಳ್ಳಿ ಠಾಣೆಗೆ ಕರೆದೊಯ್ದರು. ಅಲ್ಲಿ ಪೊಲೀಸ್ ಸಿದ್ದರಾಜು ಮತ್ತು ಇನ್ಸ್‌ಪೆಕ್ಟರ್, “ಯಾರಾದರೂ ಹಣವಂತರನ್ನು ತೋರಿಸು’ ಎಂದು ಹೆದರಿಸಿ ತಮಗೆ ಹೊಡೆದು ಕೂಡಿ ಹಾಕಿದ್ದರು. ಬಳಿಕ, ನೀನು 50 ಗ್ರಾಂ ಚಿನ್ನ, 3 ಉಂಗುರ, 50 ಸಾವಿರ ರೂ.ಕೊಡು. ಇಲ್ಲವಾದರೆ ನಿನ್ನನ್ನೇ ಕೇಸಿಗೆ μಕ್ಸ್ ಮಾಡಿ ಒಳಗೆ ಕಳುಹಿಸುತ್ತೇನೆ ಎಂದು ಹಲ್ಲೆಗೆ ಯತ್ನಿಸಿದರು. ನಂತರ, ತಮ್ಮ ಬೆರಳಿನಲ್ಲಿದ್ದ ಸುಮಾರು 10 ಗ್ರಾಂ ಉಂಗುರ, ಆಮೆ ಆಕಾರದ ಬೆಳ್ಳಿ ಉಂಗುರ ಬಿಚ್ಚಿಸಿಕೊಂಡರು ಎಂದು ದೂರಿದರು.
ಅದೇ ದಿನ ರಾತ್ರಿ ಪೊಲೀಸ್ ಜೀಪಿನಲ್ಲಿ ಇನ್ಸ್‌ಪೆಕ್ಟರ್ ಗಂಗಾಧರ್, ಪೊಲೀಸರಾದ ಸಿದ್ದರಾಜು, ಪ್ರಭು,
ಅಂಜನಾಮೂರ್ತಿ, ಚಾಲಕ ಮಹೇಶ್ ಅವರು ಲಾಕಪ್‌ನಲ್ಲಿದ್ದ ವ್ಯಕ್ತಿ ಹಾಗೂ ತಮ್ಮನ್ನು ವಾಹನದಲ್ಲಿ ಕೂರಿಸಿಕೊಂಡು ಹಿಟ್ಟನಹಳ್ಳಿ ಕೊಪ್ಪಲು ಮುಂದಿರುವ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಕರೆದೊಯ್ದರು. 100 ಗ್ರಾಂ ಚಿನ್ನ, 6 ಉಂಗುರ, 1 ಲಕ್ಷ ರೂ. ಕೊಟ್ಟು ಬಿಡು ಎಸ್ಪಿ ಮೇಡಂ ಹೇಳುತ್ತಿದ್ದಾರೆ. ಇಲ್ಲವಾದರೆ ನಿನಗೆ ಜೈಲೇ ಗತಿಯಾಗಲಿದೆ ಎಂದರು. ಎಲ್ಲಿಂದ ತಂದುಕೊಡಲಿ ಎಂದು ಕೇಳಿದಾಗ ನಿನ್ನ ಪತ್ನಿ ಕತ್ತಿನಲ್ಲಿರುವ ಮಾಂಗಲ್ಯ ಸರ ಬಿಚ್ಚಿಕೊಡು, 1 ಲಕ್ಷ ರೂ. ಹಣ ಕೊಡು ಎಂದು ಹೆದರಿಸಿದರು.
ಬಳಿಕ, ಪೊಲೀಸ್ ಅಂಜನಾ ಮೂರ್ತಿ ನಮ್ಮ ಮನೆಗೆ ಬಂದರು. ತಮ್ಮ ಪತ್ನಿಯ ಮಾಂಗಲ್ಯ ಸರವನ್ನು ಕಟಿಂಗ್ ಪ್ಲೇಯರ್‌ನಿಂದ್ ಕಟ್ ಮಾಡಿ ಅವರ ಕೈಗೆ ಕೊಟ್ಟೆ. ತಮ್ಮ ತಾಯಿ 20 ಸಾವಿರ ರೂ. ಹಣ ತಂದು ಕೊಟ್ಟರು. ಹಣ ಮತ್ತು ಮಾಂಗಲ್ಯ ಸರವನ್ನು ಇನ್ ಪೆಕ್ಟರ್ ಗಂಗಾಧರ್‌ರಿಗೆ ಪೊಲೀಸ್ ಅಂಜನಾಮೂರ್ತಿ ಕೊಟ್ಟರು.ನಂತರ, ಈ ವಿಷಯವನ್ನು ಯಾರಿಗೂ ಹೇಳಬೇಡ ಎಂದು ಬೆದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.