ಬೆಂಗಳೂರು: “ಐಫೋನ್ ಮೊಬೈಲ್ ಕೊಡಿಸದಿದ್ದಲ್ಲಿ ನಿನ್ನೊಂದಿಗೆ ಕಳೆದ ಖಾಸಗಿ ಸಮಯದ ದೃಶ್ಯಗಳನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹಾಕುತ್ತೇವೆ’ ಎಂದು ಬ್ಲಾಕ್‌ಮೇಲ್ ಮಾಡುತ್ತಿದ್ದ ಖಾಸಗಿ ಬ್ಯಾಂಕ್‌ನ ಇಬ್ಬರು ಡೆಪ್ಯೂಟಿ ಮ್ಯಾನೆಜರ್‌ಗಳು ಸೈಬರ್ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕೋಟಕ್ ಮಹೀಂದ್ರ ಬ್ಯಾಂಕ್ ಗಿರಿನಗರ ಶಾಖೆಯ ಡೆಪ್ಯೂಟಿ ಮ್ಯಾನೇಜರ್ ಆಗಿರುವ ಬಿಹಾರ ಮೂಲದ ಅಭಿಷೇಕ್ ಕುಮಾರ್ ಝಾ ಹಾಗೂ ಬೊಮ್ಮನಹಳ್ಳಿ ಶಾಖೆಯ ಡೆಪ್ಯೂಟಿ ಮ್ಯಾನೇಜರ್ ಆಗಿರುವ ಉತ್ತರ ಪ್ರದೇಶದ ಗೌರವ್ ಚೌಧರಿ ಎಂಬುವರು ಬಂಧಿಸಿದ್ದರು. ಆರೋಪಿಗಳಿಂದ ವಿಡಿಯೋ ಚಿತ್ರೀಕರಣಕ್ಕೆ ಬಳಸಿಕೊಂಡಿದ್ದ ವಾಚ್, ಲ್ಯಾಪ್‌ಟಾಪ್, ಐಪ್ಯಾಡ್, ಐದು ಮೊಬೈಲ್‌ಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೊಟಕ್ ಮಹೀಂದ್ರ ಬ್ಯಾಂಕ್‌ನ ಡೆಪ್ಯೂಟಿ ಮ್ಯಾನೆಜರ್ ಆಗಿರುವ ಅಭಿಷೇಕ್ ಕುಮಾರ್ ತನಗೆ ಪರಿಚಯವಿರುವ ಯುವತಿಯೊಬ್ಬರ ಜತೆ ಖಾಸಗಿಯಾಗಿ ಕಳೆದಿದ್ದು, ಈ ದೃಶ್ಯವನ್ನು ಸಂತ್ರಸ್ತೆಗೆ ತಿಳಿಯದಂತೆ ಚಿತ್ರೀಕರಿಸಿಕೊಂಡಿದ್ದ. ಬಳಿಕ ಈ ವಿಡಿಯೋವನ್ನು ತನ್ನ ಸ್ನೇಹಿತ ಗೌರವ್ ಚೌಧರಿಗೆ ಕೊಟ್ಟಿದ್ದ ಆತ, ಯುವತಿಯಿಂದ ಐಫೋನ್ ಎಕ್ಸ್ ಮೊಬೈಲ್‌ಗೆ ಬೇಡಿಕೆ ಇಡಲು ಸಂಚು ರೂಪಿಸಿದ್ದ.
ಅದರಂತೆ ಗೌರವ್ ಚೌಧರಿ, ಅಭಿಷೇಕ್ ಕುಮಾರ್‌ನಿಂದ ಪಡೆದ ಖಾಸಗಿ ದೃಶ್ಯಗಳ ವಿಡಿಯೋ ತುಣುಕನ್ನು ಗೂಗಲ್ ಡ್ರೈವ್ ಮೂಲಕ ತನ್ನ ಈ-ಮೇಲ್‌ಗೆ ಕಳುಹಿಸಿಕೊಂಡಿದ್ದ. ಬಳಿಕ “ಬೇಬಿ ಯುವರ್ ಗಾನ್’ ಎಂಬ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು, ವೀಡಿಯೋದ ಸ್ಕ್ರೀನ್ ಶಾಟ್‌ಗಳನ್ನು ಸಂತ್ರಸ್ತೆಯ ಇನ್‌ಸ್ಟಾಗ್ರಾಂ ಖಾತೆಗೆ ಕಳಿಹಿಸಿ, ಒಂದು ಐಫೋನ್ ಎಕ್ಸ್ ಮೊಬೈಲ್ ನೀಡಬೇಕು.
ಇಲ್ಲವಾದರೆ ಈ ವಿಡಿಯೋವನ್ನು ನಿನ್ನ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ. ಇಬ್ಬರೂ ಸೇರಿ ಆಕೆಯನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ, ಸಂತ್ರಸ್ತೆಯ ಜತೆಗೆ ನೆಲೆಸಿದ್ದ ಗೌರವ್ ಚೌಧರಿಯ ಸ್ನೇಹಿತೆ ಕೂಡ ಪ್ರಿಯಕರನ ಸೂಚನೆಯಂತೆ ಸಂತ್ರಸ್ತೆ ಜತೆ ನಿತ್ಯ ಮುಜುಗರ ತರುವ ಮಾತುಗಳನ್ನು ಆಡುತ್ತಾ ತನ್ನ ಇತರೆ ಸ್ನೇಹಿತರಿಗೆ ವೀಡಿಯೋ ಬಗ್ಗೆ ಹೇಳಿ ಅಪಹಾಸ್ಯ ಮಾಡುತ್ತಿದ್ದಳು ಎಂದು ಸಂತ್ರಸ್ತೆ ಪೊಲೀಸರಿಗೆ ದೂರಿನಲ್ಲಿ ಆರೋಪಿಸಿದ್ದಳು. ಅದರಂತೆ ಪ್ರಕರಣ ದಾಖಲಿಸಿಕೊಂಡ ಸೈಬರ್ ಕ್ರೈಂ ಪೊಲೀಸರು ಗೌರವ್ ಚೌಧರಿ ಮತ್ತು ಅಭಿಷೇಕ್ ಕುಮಾರ್ ಝಾ ಎಂಬುವರನ್ನು ಬಂಧಿಸಿದ್ದಾರೆ.