ಬೆಂಗಳೂರು: ಮನೆಯಲ್ಲಿದ್ದ ಹಣವನ್ನು ತೆಗೆದುಕೊಂಡು ಬಂದು ನಿತ್ಯ ಸ್ನೇಹಿತರ ಜತೆ ತಿಂಡಿ ತಿನ್ನುತ್ತಿದ್ದ ಅಪ್ರಾಪ್ತೆಗೆ ಬ್ಲ್ಯಾಕ್‌ಮೇಲ್ ಮಾಡಿ 20 ಲಕ್ಷ ರೂ. ಸುಲಿಗೆ ಮಾಡಿದ್ದ ನೆರೆಮನೆ ದಂಪತಿ ಹಾಗೂ ಬಾಲಕಿ ಮನೆಯ ಹಿಂಬದಿ ಬಾಗಿಲು ಮುರಿದು 25 ಲಕ್ಷ ರೂ. ದೋಚಿದ್ದ ರೌಡಿಶೀಟರ್ ಸೇರಿ ನಾಲ್ವರು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶ ಮೂಲದ ಮೋಹಿದ್ ರಜಾ, ಆತನ ಪತ್ನಿ ಫಾತಿಮಾ, ಅಶೋಕನಗರ ಠಾಣೆ ರೌಡಿಶೀಟರ್ ಸಲ್ಮಾನ್ ಖಾನ್ ಮತ್ತು ಆತನ ಸಹಚರ ಅಸ್ಗರ್ ಮೆಹದಿ ಬಂಧಿತರು.
ಆರೋಪಿಗ ಳಿಂದ 24.43 ಲಕ್ಷ ರೂ. ನಗದು ಮತ್ತು 150 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದರು. ನೀಲಸಂದ್ರದ ಮೊಹಮದ್ ಶಬುದ್ದೀನ್ ಮನೆಯಲ್ಲಿ ಮೇ 7ರಂದು ರೌಡಿಶೀಟರ್ ಸಲ್ಮಾನ್ ಖಾನ್ ಮತ್ತು ಆತನ ಸಹಚರ ಅಸYರ್ ಮೆಹದಿ ನಗದು ಮತ್ತು ಚಿನ್ನಾಭರಣ ದೋಚಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಆಗ ಆರೋಪಿಗಳು ಖಾಸಗಿ ಬಸ್ ಮೂಲಕ ಮುಂಬೈಗೆ ಪರಾರಿಯಾಗಲು ಮುಂದಾಗಿದ್ದರು. ಈ ಖಚಿತ ಮಾಹಿತಿ ಮೇರೆಗೆ ಕ್ಷೀಪ್ರ ಕಾರ್ಯಾಚರಣೆ ನಡೆಸಿ, ಘಟನೆ ನಡೆದ 24 ಗಂಟೆಯಲ್ಲೇ ಇಬ್ಬರನ್ನು ಚಿತ್ರದುರ್ಗದಲ್ಲಿ ಬಂಧಿಸಿ, ನಗರಕ್ಕೆ ಕರೆ ತರಲಾಗಿದೆ. ಬಳಿಕ 10 ದಿನಗಳ ಕಾಲ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಮನೆ ಕಳವು ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಈ ಕೃತ್ಯದ ಹಿಂದೆ ದೂರುದಾರರ ಮನೆ ಪಕ್ಕದ ದಂಪತಿ ಕೂಡ ಭಾಗಿಯಾಗಿದ್ದರು ಎಂಬ ಸಂಗತಿ ಬಾಯಿಬಿಟ್ಟಿದ್ದಾರೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಏನಿದು ಬ್ಲ್ಯಾಕ್‌ಮೇಲ್ ಕೇಸ್?: ಚಿತ್ರದುರ್ಗ ಮೂಲದ ಮೊಹಮದ್ ಶಬುದ್ದೀನ್ ಅವರ ತಂದೆ ನಿವೃತ್ತ ಆರೋಗ್ಯ ನಿರೀಕ್ಷಕರಾಗಿದ್ದು ಮಗ ಸ್ವಂತ ಮನೆ ಕಟ್ಟಿಕೊಳ್ಳಲಿ ಎಂದು ಶಬುದ್ದೀನ್‌ಗೆ ಕಳೆದ ವರ್ಷ 50 ಲಕ್ಷ ರೂ. ನಗದು ನೀಡಿದ್ದರು. ಶಬುದ್ದೀನ್ ದಂಪತಿ ಬೀರುವಿನಲ್ಲಿ ಹಣವಿಟ್ಟರೆ ಮಕ್ಕಳು ನೋಡುತ್ತಾರೆ ಎಂದು ಕೊಠಡಿಯ ಸೆಲ್ಫ್ ಮೇಲೆ ಇಟ್ಟಿದ್ದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಅವರ 13 ವರ್ಷದ ಮಗಳು ಅಚಾನಕ್ಕಾಗಿ ಬ್ಯಾಗ್‌ನಲ್ಲಿ ಹಣ ಇರುವುದನ್ನು ಗಮನಿಸಿ, ಒಂದೆರಡು ಸಾವಿರ ರೂ. ತೆಗೆದುಕೊಂಡು, ಪಕ್ಕದ ಮನೆಯ ಮೋಹಿದ್ ರಜಾ, ಫಾತಿಮಾ ದಂಪತಿ ಮಕ್ಕಳ ಜತೆ ತಿಂಡಿ ತಿನಿಸಿಗೆ ಖರ್ಚು ಮಾಡಿದ್ದಳು. ಅಲ್ಲದೆ, ತಮ್ಮ ಮನೆಯಲ್ಲಿ ಬ್ಯಾಗ್‌ನಲ್ಲಿ ಹಣವಿದೆ ಎಂದು ಕೂಡ ಹೇಳಿಕೊಂಡಿದ್ದಳು. ಇದನ್ನು ಕೇಳಿಸಿಕೊಂಡಿದ್ದ ಮೊಹಿದ್ ರಜಾ ದಂಪತಿ, ನಮಗೆ ಹಣ ತಂದುಕೊಡದಿದ್ದರೆ ಬ್ಯಾಗ್ ನಲ್ಲಿ ಹಣ ಕದಿಯುವುದನ್ನು ನಿಮ್ಮ ತಂದೆ-ತಾಯಿಗೆ ಹೇಳುತ್ತೇವೆ. ನಿಮ್ಮ ತಂದೆ, ತಾಯಿಯನ್ನು ಕೊಲ್ಲುತ್ತೇವೆ ಎಂದು ಬಾಲಕಿಗೆ ಹೆದರಿಸಿದ್ದಾರೆ. ಇದರಿಂದ ಗಾಬರಿಗೊಂಡ ಬಾಲಕಿ, ಈ ವರ್ಷದ ರಂಜಾನ್‌ವರೆಗೆ ಮನೆಯಿಂದ ಹಂತ-ಹಂತವಾಗಿ 20 ಲಕ್ಷ ರೂ. ಕದ್ದು ದಂಪತಿಗೆ ನೀಡಿದ್ದಳು. ರಂಜಾನ್ ಬಳಿಕ ಹಣದ ಬ್ಯಾಗನ್ನು ಶಬುದ್ದೀನ್ ದಂಪತಿ ಬೀರುವಿನಲ್ಲಿಟ್ಟಿದ್ದು ಬಾಲಕಿಗೆ ಹಣ ತೆಗೆಯಲು ಸಾಧ್ಯವಾಗಿಲ್ಲ. ಕಡೆಗೆ ಬಾಲಕಿ ತನ್ನ ತಂದೆ ಹಣದ ಬ್ಯಾಗ್ ಬೀರುವಿನಲ್ಲಿಟ್ಟಿದ್ದಾರೆ ಎಂದು ದಂಪತಿಗೆ ತಿಳಿಸಿದ್ದಳು.
ರೌಡಿಶೀಟರ್‌ನಿಂದ ಮನೆ ಕಳ್ಳತನ: ಈ ವಿಚಾರ ತಿಳಿದುಕೊಂಡ ಮೊಹಿದ್, ರೌಡಿಶೀಟರ್ ಸಲ್ಮಾನ್ ಗೆ ವಿಷಯ ತಿಳಿಸಿ ಮನೆಗಳ್ಳತನದ ಬಗ್ಗೆ ಚರ್ಚಿಸಿದ್ದ. ಈ ಸಂಚಿನಂತೆ ಮೇ 7ರಂದು ಮೊಹಮ್ಮದ್ ದಂಪತಿ ಹಾಗೂ ಕುಟುಂಬ ಸದಸ್ಯರು ಇಲ್ಲದ ವೇಳೆ ರೌಡಿಶೀಟರ್ ಸೇರಿ ಇಬ್ಬರು ಮೊಹಮ್ಮದ್ ಮನೆಯ ಹಿಂಬದಿ ಬಾಗಿಲ ಮುರಿದು, ಮನೆಗೆ ಒಳಗೆ ನುಗ್ಗಿದ್ದಾರೆ. ಬಳಿಕ ಕಬ್ಬಿಣದ ಬೀರುವನ್ನು ಆಯುಧದಿಂದ ಮೀಟಿ ಬೀರುವಿನಲ್ಲಿದ್ದ ಲಕ್ಷಾಂತರ ರೂ.ನಗದು ಮತ್ತು ಚಿನ್ನಾಭರಣ ದೋಚಿ ಪರಾರಿ ಯಾಗಿದ್ದರು ಎಂದು ಆಯುಕ್ತರು ಹೇಳಿದರು.