ಬೆಂಗಳೂರು: ಸಿಸಿಬಿ ಕಚೇರಿಯಲ್ಲೇ ನಾಪತ್ತೆಯಾದ 1.60 ಕೋಟಿ ರೂ. ಕಪ್ಪು ಹಣ ಪ್ರಕರಣ ಸಂಬಂಧ ಸಿಸಿಬಿ ಎಎಸ್‌ಐ ಹೊಂಬಾಳೇಗೌಡ, ಪೇದೆಗಳಾದ ನರಸಿಂಹಮೂರ್ತಿ ಹಾಗೂ ಗಂಗಾಧರ್ ವಿರುದ್ಧ ಕಾಟನ್‌ಪೇಟೆಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ರವಿಕುಮಾರ್ ಎಫ್ಐಆರ್ ದಾಖಲಿಸಿದ್ದಾರೆ. ಹೈಗ್ರೌಂಡ್ಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಈ ಮೂವರು ಶೇಷಾದ್ರಿಪುರ ಪೊಲೀಸರು ಎಂದು ಹೇಳಿ 1 ಕೋಟಿ ರೂ. ಹಳೇ ನೋಟುಗಳನ್ನು ದೋಚಿದ್ದರು.
ಈ ಸಂಬಂಧ ಬಿಎಂಟಿಸಿ ಚಾಲಕ ಸುಬಾನು ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ಈ ಪ್ರಕರಣದ ತನಿಖೆ ನಡೆಸಿದಾಗ ಮೂವರು ಅಸಲಿ ಸಿಸಿಬಿ ಪೊಲೀಸರು ಎಂದು ತಿಳಿದಿತ್ತು. ಪ್ರಕರಣದ ತನಿಖೆ ತೀವ್ರಗೊಂಡಾಗ ಸಿಸಿಬಿ ಕಚೇರಿಯಲ್ಲೇ 1.60 ಕೋಟಿ ರೂ. ನಾಪತ್ತೆಯಾರುವುದು ಬೆಳಕಿಗೆ ಬಂದಿತ್ತು.
ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಹಣ ನಾಪತ್ತೆ ಕುರಿತು ವರದಿ ನೀಡುವಂತೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್‌ಗೆ ಸೂಚಿಸಿದ್ದರು. ಡಿಸಿಪಿ ಜಿನೇಂದ್ರ ಖಣಗಾವಿ ನೇತೃತ್ವದ ತಂಡ ನೋಟು ಅಮಾನ್ಯದ ಬಳಿಕ ಇದುವರೆಗೂ ಬ್ಲ್ಯಾಕ್ ಆ್ಯಂಡ್ ವೈಟ್ ದಂಧೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಪರಿಶೀಲಿಸಿದಾಗ 1.60 ಕೋಟಿ ಹಣ ನಾಪತ್ತೆಯಾಗಿರುವುದು ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಸಿಸಿಬಿಯ ಮನೆ ಮತ್ತು ಕನ್ನ ಕಳವು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇನ್‌ಸ್ಪೆಕ್ಟರ್ ಭಾನುಪ್ರಕಾಶ್ ನೋಟು ಅಮಾನ್ಯ ಸಂದರ್ಭದಲ್ಲಿ ಶಂಕರಪುರ ಠಾಣಾ ವ್ಯಾಪ್ತಿಯಲ್ಲಿ 3 ಕೋಟಿ ಹಳೇ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಹಣವನ್ನು ಕಚೇರಿಯಲ್ಲಿ ಲಾಕರ್ ಹಾಗೂ ಬೀರು ಇಲ್ಲದ ಕಾರಣ ಬ್ಯಾಗ್‌ನಲ್ಲಿ ಕಟ್ಟಿ ಇಟ್ಟಿದ್ದರು.
ಇದೇ ಆಗಸ್ಟನಲ್ಲಿ ಭಾನುಪ್ರಸಾದ್ ನಿವೃತ್ತರಾದಾಗ, ಹಿರಿಯ ಅಧಿಕಾರಿಗಳ ಸೂಚನೆಯಂತೆ ಡಿ.10ರಂದು ಭಾನುಪ್ರಕಾಶ್ ತಮ್ಮ ಅಧಿಕಾರಾವಧಿಯಲ್ಲಿ ವಶಕ್ಕೆ ಪಡೆದ ಹಣ ಹಾಗೂ ಪ್ರಕರಣದ ಕಡತಗಳನ್ನು ಒಪ್ಪಿಸಲು ಬಂದಿದ್ದರು. ಈ ಸಮಯದಲ್ಲಿ 3 ಕೋಟಿ ರೂ. ಪೈಕಿ 1.60 ಕೋಟಿ ರೂ. ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಹಣವನ್ನು ಈ ಮೂವರು ಆರೋಪಿಗಳೇ ದುರ್ಬಳಕೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿತ್ತು. ಭಾನುಪ್ರಕಾಶ್ ನಿವೃತ್ತರಾದ ಬಳಿಕ ಈ ಕೊಠಡಿಯನ್ನು ಈ ಮೂವರು ಆರೋಪಿಗಳು ಬಳಸುತ್ತಿದ್ದರು. ಜತಗೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮೂವರು ತಲೆಮರೆಸಿಕೊಂಡಿರುವುದರಿಂದ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಹಳೇ ನೋಟುಗಳನ್ನು ವಶಕ್ಕೆ ಪಡೆಯಬೇಕು ಎಂದು ಇನ್‌ಸ್ಪೆಕ್ಟರ್ ರವಿಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
ಎಸಿಪಿ ಪಾತ್ರದ ಬಗ್ಗೆ ಅನುಮಾನ: ಸಾಮಾನ್ಯವಾಗಿ ಸಿಸಿಬಿಗೆ ಹಿರಿಯ ಅಧಿಕಾರಿ ಕರ್ತವ್ಯಕ್ಕೆ ಹಾಜರಾದ ಸಂದರ್ಭದಲ್ಲಿ ವಿಭಾಗದ ಹಳೇ ಮತ್ತು ಹೊಸ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಎಸಿಪಿ ಮರಿಯಪ್ಪ ಅವರ ಗಮನಕ್ಕೆ ಬಾರದೆ ಇಷ್ಟೊಂದು ದೊಡ್ಡ ಮೊತ್ತದ ಹಣ ಏಕಾಏಕಿ ನಾಪತ್ತೆಯಾಗಲು ಸಾಧ್ಯವಿಲ್ಲ.
ಆದರೆ, ಪ್ರಾಥಮಿಕ ಮಾಹಿತಿ ಪ್ರಕಾರ ಮರಿಯಪ್ಪ ವಿರುದ್ಧ ಯಾವುದೇ ಸಾûಾ$Âಧಾರಗಲಿಲ್ಲ. ಹೀಗಾಗಿ ಆ ಮೂವರು ಆರೋಪಿಗಳು ಪತ್ತೆಯಾಗುವವರೆಗೂ ಎಸಿಪಿ ಪಾತ್ರದ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹಿರಿಯ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.