ಕುಷ್ಟಗಿ: ತಾಲೂಕಿನ ಹಿರೇಮನ್ನಾಪೂರ ಗ್ರಾಮದ ಯುವಕನ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ತಿರುವುದು ಸಿಕ್ಕಿದೆ. ಇನ್ಸ್ಟಾಗ್ರಾಮ್ ನಿಂದ ಶುರುವಾದ ಪ್ರೇಮ ಪ್ರಕರಣ ಕೊಲೆಯಲ್ಲಿ ಅಂತ್ಯ ಕಂಡಿದ್ದು, ಈ ಪ್ರಕರಣದಲ್ಲಿ ಮಹಿಳೆ, ಹಾಲಿ ಪ್ರಿಯಕರನೊಂದಿಗೆ ಸೇರಿ ಮಾಜಿ ಪ್ರಿಯಕರನ್ನು ಹತ್ಯೆ ಮಾಡಿರುವುದು ಬಯಲಾಗಿದೆ. ತ್ರಿಶಂಕು ಸ್ಥಿತಿಯ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಕುಷ್ಟಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುಗಳಖೋಡ್ ಗ್ರಾಮದ ಮಹಿಳೆ ಭಾಗ್ಯಶ್ರೀ ಹನಮಂತ ಢೋಣಿ ಹಾಗೂ ಆಕೆಯ ಹಾಲಿ ಪ್ರಿಯಕರ ಇಬ್ರಾಹಿಂಸಾಬ್ ದರಸಾಬ್ ಎಲಿಗಾರ ಕೊಲೆ ಆರೋಪಿಗಳು. ಪತಿಯನ್ನು ಕಳೆದುಕೊಂಡಿದ್ದ ಭಾಗ್ಯಶ್ರೀಗೆ ಮೂರು ಮಕ್ಕಳಿದ್ದು, ಸಾಮಾಜಿಕ ಜಾಲತಾಣದ ಮೂಲಕ ಹಿರೇಮನ್ನಾಪೂರ ಯುವಕ ಶರಣಪ್ಪ ಶಿವಪ್ಪ ಮಸ್ಕಿ ಪರಿಚಯವಾಗಿತ್ತು.
ಶರಣಪ್ಪ ಮಸ್ಕಿ ತನಗೆ ಪ್ರತಿ ದಿನ 6 ಸಾವಿರ ಆದಾಯವಿದೆ ಎಂದು ಯಾಮಾರಿಸಿ, ಭಾಗ್ಯಶ್ರೀಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಶರಣಪ್ಪ ಮಸ್ಕಿ ಕೂಲಿ ಕಾರ್ಮಿಕ ಎನ್ನುವ ನಿಜಸ್ಥಿತಿ ಗೊತ್ತಾಗಿ ದೂರವಿದ್ದಾಗ್ಯೂ ಶರಣಪ್ಪ ಮಸ್ಕಿ, ಭಾಗ್ಯಶ್ರೀ ಜತೆಗಿನ ಚಿತ್ರಗಳನ್ನು ಎಡಿಟ್ ಮಾಡಿ ಮಾರ್ಫಿಂಗ್ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಹರಿಬಿಡುತ್ತಿದ್ದ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ರೋಸಿ ಹೋಗಿದ್ದ ಭಾಗ್ಯ ಶ್ರೀ, ಶರಣಪ್ಪ ಮಸ್ಕಿಗೆ ಎಚ್ಚರಿಕೆ ನೀಡಿದರೂ ಮಾತು ಕೇಳಿರಲಿಲ್ಲ. ಇದನ್ನು ಸಹಿಸದ ಭಾಗ್ಯಶ್ರೀ ಒಮ್ಮೆ ಹಿರೇಮನ್ನಾಪೂರಕ್ಕೆ ಬಂದು ಮೊಬೈಲ್ ಕಸಿದುಕೊಂಡು ಹೋಗಿದ್ದರೂ, ಶರಣಪ್ಪ ಮಸ್ಕಿ ಹಳೆ ಚಾಳಿ ಮುಂದುವರೆಸಿದ್ದ. ಭಾಗ್ಯಶ್ರೀ ಹಾಲಿ ಪ್ರಿಯಕರ ಇಬ್ರಾಹಿಂಸಾಬ್ ಎಲಿಗಾರನೊಂದಿಗೆ ಸೆ.29ರಂದು ಮುಗಳಖೋಡ್ ನಿಂದ ಬೈಕಿನಲ್ಲಿ ಕುಷ್ಟಗಿ ತಾಲೂಕಿನ ಹಿರೇಮನ್ನಾಪುರಕ್ಕೆ ಬಂದು, ಶರಣಪ್ಪ ಮಸ್ಕಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಸಾಕ್ಷಿ ನಾಶಕ್ಕೆ ಹಾಸಿಗೆಯಲ್ಲಿ ಸುತ್ತಿ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ತ್ರಿಶಂಕು ಸ್ಥಿತಿಯ ಈ ಕೊಲೆ ಪ್ರಕರಣವನ್ನು ಕುಷ್ಟಗಿ ಪೊಲೀಸರು ಬೇಧಿಸಿ ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕೊಲೆಗೈದ ಇಬ್ಬರನ್ನೂ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹೇಮಂತ್ ಕುಮಾರ ಆರ್., ಡಿವೈಎಸ್ಪಿ ಸಿದ್ಲಿಂಗಪ್ಪಗೌಡ ಪಾಟೀಲ, ಸಿಪಿಐ ಯಶವಂತ ಬಿಸನಳ್ಳಿ, ಪಿಎಸೈ ಹನಮಂತಪ್ಪ ತಳವಾರ, ಎಎಸೈ ದುರಗಪ್ಪ ಹಿರೇಮನಿ, ಸಿಬ್ಬಂದಿಗಳಾದ ಅಮರೇಶ, ಶ್ರೀಧರ, ಪ್ರಶಾಂತ, ಸಂಗಮೇಶ, ಪರಶುರಾಮ್, ಪ್ರಸಾದ್, ಮಂಜುನಾಥ ನೇತೃತ್ವದ ವಿಶೇಷ ತಂಡಕ್ಕೆ ಕೊಪ್ಪಳ ಜಿಲ್ಲಾ ಎಸ್ಪಿ ಡಾ.ರಾಮ್ ಎಲ್. ಅರಸಿದ್ದಿ ಅವರು, ಬಹುಮಾನ ಘೋಷಿಸಿದ್ದಾರೆ.
ಕೊಲೆಯಾದ ಯುವಕ ಶರಣಪ್ಪ ಮಸ್ಕಿ