Advertisement

ರಾಘವೇಶ್ವರ ಸ್ವಾಮೀಜಿಗೆ “ಬ್ಲ್ಯಾಕ್‌ ಮೇಲ್‌’ಪ್ರಕರಣ

06:15 AM Feb 02, 2019 | |

ಬೆಂಗಳೂರು: ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗೆ “ಬ್ಲ್ಯಾಕ್‌ ಮೇಲ್’ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಹೊನ್ನಾವರ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ರಾಮಕಥಾ ಗಾಯಕಿ ಪ್ರೇಮಲತಾ ಶಾಸ್ತ್ರಿ, ಅವರ ಪತಿ ದಿವಾಕರ ಶಾಸ್ತ್ರಿ ಹಾಗೂ ಸಂಬಂಧಿ ನಾರಾಯಣಶಾಸ್ತ್ರಿ ವಿರುದ್ಧ ನಡೆಯುತ್ತಿರುವ ವಿಚಾರಣೆ ರದ್ದುಗೊಳಿಸಲು ನಿರಾಕರಿಸಿರುವ ಹೈಕೋರ್ಟ್‌, ಈ ಕುರಿತು ಸಲ್ಲಿಸಲಾಗಿದ್ದ ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿದೆ.

Advertisement

ಅಲ್ಲದೇ ಪ್ರಕರಣದ ಇತರ ಆರೋಪಿಗಳಾದ ಮತ್ತು ವಕೀಲರೂ ಆಗಿರುವ ಬಿ.ಟಿ.ವೆಂಕಟೇಶ್‌, ಗಂಗಾಧರ ಶಾಸ್ತ್ರಿ, ಜ್ಯೋತಿಷಿ ಪದ್ಮನಾಭ ಶರ್ಮ, ಪದ್ಮಶ್ರೀ ಪುರಸ್ಕೃತ ಚ.ಮೂ. ಕೃಷ್ಣಶಾಸ್ತ್ರಿ ವಿರುದ್ಧದ ವಿಚಾರಣೆಯನ್ನು ಕೈಬಿಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ಹೈಕೋರ್ಟ್‌ನ ಈ ಆದೇಶದಂತೆ ಬ್ಲ್ಯಾಕ್‌ ಮೇಲ್‌ ಪ್ರಕರಣದ ಪ್ರಮುಖ ಆರೋಪಿಗಳಾದ ಪ್ರೇಮಲತಾ ಶಾಸ್ತ್ರಿ, ದಿವಾಕರ ಶಾಸ್ರಿ$¤ ಮತ್ತು ನಾರಾಯಣ ಶಾಸ್ತ್ರಿ ವಿರುದ್ಧದ ವಿಚಾರಣೆ ಮುಂದುವರಿಯಲಿದೆ.

ಸ್ವಾಮೀಜಿಗೆ ಬ್ಲ್ಯಾಕ್‌ ಮೇಲ್‌ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿದ್ದ ಹೊನ್ನಾವರ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನ ಕ್ರಮ ಪ್ರಶ್ನಿಸಿ ಪ್ರೇಮಲತಾ ಶಾಸ್ತ್ರಿ, ದಿವಾಕರ ಶಾಸ್ತ್ರಿ ಹಾಗೂ ನಾರಾಯಣ ಶಾಸ್ತ್ರಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆಯನ್ನು ಧಾರವಾಡ ಹೈಕೋರ್ಟ್‌ ಪೀಠದಲ್ಲಿ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾ.ಕೆ.ಎಸ್‌.ಮುದಗಲ್‌ ಅವರಿದ್ದ ನ್ಯಾಯಪೀಠ ಶುಕ್ರವಾರ ಬೆಂಗಳೂರಿನ ಪೀಠದಲ್ಲಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ತೀರ್ಪು ಪ್ರಕಟಸಿತು. 

ಮೂವರು ಆರೋಪಿಗಳ ವಿರುದ್ಧದ ಆರೋಪಗಳಲ್ಲಿ ಸತ್ಯಾಂಶ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದಕ್ಕೆ ಪೂರಕವಾದ ದಾಖಲೆ ಮತ್ತು ಸಾಕ್ಷ್ಯಾಧಾರಗಳೂ ಸಹ ಇವೆ. ಹಾಗಾಗಿ, ಈ ಮೂವರ ವಿರುದ್ಧ ಹೊನ್ನಾವರ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ. 

ಏನಿದು ಬ್ಲ್ಯಾಕ್‌ ಮೇಲ್‌ ಪ್ರಕರಣ: ಮೂರು ಕೋಟಿ ಹಣ ನೀಡಬೇಕು. ರಾಮಚಂದ್ರಾಪುರ ಮಠದ ಪೀಠಾಧಿಪತಿ ಸ್ಥಾನ ತೊರೆದು, ಆ ಸ್ಥಾನಕ್ಕೆ ತಾವು ಸೂಚಿಸಿದ ವ್ಯಕ್ತಿಯನ್ನು ನೇಮಿಸಬೇಕು. ತಪ್ಪಿದರೆ ಅತ್ಯಾಚಾರ ದೂರು ದಾಖಲಿಸಿ ಜೀವನ ಪರ್ಯಂತ ಜೈಲಿನಲ್ಲಿರುವಂತೆ ಮಾಡಲಾಗುವುದು ಎಂಬುದಾಗಿ ರಾಘವೇಶ್ವರ ಸ್ವಾಮೀಜಿ ಅವರಿಗೆ ರಾಮಕಥಾ ಗಾಯಕಿ ಪ್ರೇಮಲತಾ, ಪತಿ ದಿವಾಕರ ಶಾಸ್ತ್ರಿ ಮತ್ತು ಸಂಬಂಧಿ ನಾರಾಯಣ ಶಾಸ್ತ್ರಿ ಬ್ಲಾಕ್‌ವೆುಲ್‌ ಮಾಡಿದ್ದಾರೆ ಎಂದು ಆರೋಪಿಸಿ ಮಠದ ಭದ್ರತಾ ವಿಭಾಗದ ಕಾಯದರ್ಶಿ ಹಾಗೂ ರಾಮಕಥಾ ಸಂಚಾಲಕ ಬಿ.ಆರ್‌.ಚಂದ್ರಶೇಖರ ಹೊನ್ನಾವರ ಠಾಣಾ ಪೊಲೀಸರಿಗೆ ದೂರು ದಾಖಲಿಸಿದ್ದರು. 

Advertisement

ಸರ್ಕಾರವು ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿತ್ತು. ತನಿಖೆ ನಡೆಸಿದ್ದ ಸಿಐಡಿ ಹೊನ್ನಾವರ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ “ಬಿ’ ರಿಪೋರ್ಟ್‌ ಸಲ್ಲಿಸಿತ್ತು. ಈ “ಬಿ’ ರಿಪೋರ್ಟ್‌ ವಿರೋಧಿಸಿ ದೂರುದಾರರು ಅಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ನಡೆಸಿದ್ದ ಹೊನ್ನಾವರ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸಿಐಡಿ ಪೊಲೀಸರ ಬಿ ರಿಪೋರ್ಟ್‌ ತಿರಸ್ಕರಿಸಿ, ಪ್ರಕರಣವು ವಿಚಾರಣೆಗೆ ಅರ್ಹವಾಗಿದೆ ಎಂದು ಆದೇಶಿಸಿ, ಆರೋಪಿಗಳ ವಿರುದ್ಧ ಸಮನ್ಸ್‌ ಜಾರಿಗೊಳಿಸಿತ್ತು.

ಈ ಕ್ರಮ ಪ್ರಶ್ನಿಸಿ ಪ್ರೇಮಲತಾ ಮತ್ತವರ ಪತ್ನಿ ದಿವಾಕರ ಶಾಸ್ತ್ರಿ, ನಾರಾಯಣ ಶಾಸ್ತ್ರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ದೂರುದಾರ ಚಂದ್ರಶೇಖರ್‌ ಅವರ ಪರ ಹಿರಿಯ ವಕೀಲ ಎಸ್‌.ಎಂ.ಚಂದ್ರಶೇಖರ್‌ ವಾದ ಮಂಡಿಸಿದ್ದರು. ವಕೀಲರಾದ ಶಂಬುಶರ್ಮಾ ಹಾಗೂ ಪ್ರಶಾಂತ್‌ ಗೌಡರ್‌ ವಕಾಲತ್ತು ವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next