ನಾಗಪುರ: ದುಷ್ಟ ಶಕ್ತಿಗಳನ್ನು ಓಡಿಸಲು ಬ್ಲ್ಯಾಕ್ ಮ್ಯಾಜಿಕ್ ಮಾಡುತ್ತಿದ್ದ ಸಂದರ್ಭ ಐದು ವರ್ಷ ಪ್ರಾಯದ ಬಾಲಕಿಯನ್ನು ಪೋಷಕರು ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಶುಕ್ರವಾರ ಮಧ್ಯರಾತ್ರಿ ಘಟನೆ ನಡೆದಿದ್ದು, ಪೊಲೀಸರು ಮಗುವಿನ ತಂದೆ ಸಿದ್ಧಾರ್ಥ್ ಚಿಮ್ನೆ (45), ತಾಯಿ ರಂಜನಾ (42) ಮತ್ತು ಚಿಕ್ಕಮ್ಮ ಪ್ರಿಯಾ ಬನ್ಸೋದ್ (32) ಅವರನ್ನು ಬಂಧಿಸಿದ್ದಾರೆ.
ಯೂಟ್ಯೂಬ್‌ನಲ್ಲಿ ಸ್ಥಳೀಯ ಸುದ್ದಿ ವಾಹಿನಿಯನ್ನು ನಡೆಸುತ್ತಿರುವ ಸುಭಾಷ್ ನಗರದ ನಿವಾಸಿ ಚಿಮ್ನೆ, ಕಳೆದ ತಿಂಗಳು ಗುರು ಪೂರ್ಣಿಮೆಯಂದು ತನ್ನ ಪತ್ನಿ ಮತ್ತು 5 ಮತ್ತು 16 ವರ್ಷ ಪ್ರಾಯದ ಇಬ್ಬರು ಹೆಣ್ಣುಮಕ್ಕಳೊಂದಿಗೆ ತಕಲ್ಗಾಟ್ ಪ್ರದೇಶದ ದರ್ಗಾಕ್ಕೆ ಹೋಗಿದ್ದಾರೆ.
ಅಂದಿನಿಂದ ಚಿಮ್ನೆ ತನ್ನ ಕಿರಿಯ ಮಗಳಲ್ಲಿ ವರ್ತನೆಯ ಬದಲಾವಣೆಗಳನ್ನು ಗಮನಿಸಿದ್ದು. ಅವಳು ದುಷ್ಟ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿದ್ದಾಳೆಂದು ಗ್ರಹಿಸಿ, ಅದನ್ನು ಓಡಿಸಲು “ಬ್ಲ್ಯಾಕ್ ಮ್ಯಾಜಿಕ್’ ಮಾಡಲು ನಿರ್ಧರಿಸಿದ್ದಾರೆ. ಬ್ಲ್ಯಾಕ್ ಮ್ಯಾಜಿಕ್ ಮಾಡುವ ವೀಡಿಯೊವನ್ನು ಪೋಷಕರು ಚಿತ್ರೀಕರಿಸಿದ್ದು, ತನಿಖೆ ಸಂದರ್ಭ ವೀಡಿಯೋದಲ್ಲಿ ಆರೋಪಿಗಳು ಅಳುತ್ತಿದ್ದ ಬಾಲಕಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಿರುವುದು ಕಂಡುಬಂದಿದೆ.
ಮಗುವಿಗೆ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಉತ್ತರಿಸಲು ಸಾಧ್ಯವಾಗಿರಲಿಲ್ಲ. ಇದಕ್ಕೆ ಮೂವರು ಆರೋಪಿಗಳು ಮಗುವಿಗೆ ಕಪಾಳಮೋಕ್ಷ ಮಾಡಿ ತೀವ್ರವಾಗಿ ಥಳಿಸಿದ್ದಾರೆ. ಇದರಿಂದ ಆಕೆ ಪ್ರಜ್ಞಾಹೀನಳಾಗಿ ನೆಲದ ಮೇಲೆ ಕುಸಿದಳು ಎಂದು ಅಧಿಕಾರಿ ತಿಳಿಸಿದ್ದಾರೆ. ಆರೋಪಿಗಳು ಶನಿವಾರ ಬೆಳಗ್ಗೆ ಮಗುವನ್ನು ದರ್ಗಾಕ್ಕೆ ಕರೆದೊಯ್ದಿದ್ದಾರೆ.
ಬಳಿಕ ಆಕೆಯನ್ನು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಓಡಿ ಹೋಗಿದ್ದಾರೆ. ಆಸ್ಪತ್ರೆಯ ಭದ್ರತಾ ಸಿಬಂದಿ ಅನುಮಾನಾಸ್ಪದವಾಗಿ ಅವರ ಕಾರಿನ ಚಿತ್ರವನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.