ಕೊಪ್ಪಳ: ಯಲಬುರ್ಗಾ ತಾಲೂಕಿನ ಹಿರೇಬೀಡನಾಳ ಗ್ರಾಮದ ವ್ಯಕ್ತಿ ಬ್ಲ್ಯಾಕ್ ಫಂಗಸ್‌ನಿಂದ ಬಳಲಿ ಚಿಕಿತ್ಸೆಗಾಗಿ 4 ದಿನಗಳ ಕಾಲ ವಿವಿಧೆಡೆ ಆಸ್ಪತ್ರೆಗಳಿಗೆ ಬುಲೋರೋ ವಾಹನದಲ್ಲಿ ಅಲೆದಾಡಿದ ಪ್ರಸಂಗ ಬೆಳಕಿಗೆ ಬಂದಿದೆ.
ಕೊನೆಗೂ ಆತನಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆಯಾಗಿದೆ. ಯಲಬುರ್ಗಾ ತಾಲೂಕಿನ ಹಿರೇಬಿಡನಾಳದ ವ್ಯಕ್ತಿಗೆ ಮೇ 17ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಮೇ 20ರಂದು ಆತನಿಗೆ ಬ್ಲ್ಯಾಕ್ ಫಂಗಸ್ ಲಕ್ಷಣಗಳು ಗೋಚರವಾಗಿವೆ. ಆತ ಕೂಡಲೇ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ. ಆದರೆ ಕೊಪ್ಪಳ ಆಸ್ಪತ್ರೆಯಲ್ಲಿ ಫಂಗಸ್‌ಗೆ ಚಿಕಿತ್ಸೆ ಇಲ್ಲ ಕಿಮ್ಸ್‌ಗೆ ತೆರಳುವಂತೆ ಸೂಚನೆ ನೀಡಿದ್ದಾರೆ.
ಯಾರೋ ಹರಪನಹಳ್ಳಿ ಭಾಗದಲ್ಲಿ ಚಿಕಿತ್ಸೆ ನೀಡುತ್ತಾರೆ ಎಂದು ಹೇಳಿದ್ದನ್ನು ಕೇಳಿ ಅಲ್ಲಿಗೂ ಆ ವ್ಯಕ್ತಿ ಬುಲೋರೋ ವಾಹನದಲ್ಲಿ ತೆರಳಿದ್ದಾನೆ. ಅಲ್ಲಿ ಸಹ ಚಿಕಿತ್ಸೆ ಸಿಕ್ಕಿಲ್ಲ. ಕೊನೆಗೂ ಹಡಗಲಿಯಲ್ಲಿ ಚಿಕಿತ್ಸೆ ಸಿಗುತ್ತೆ ಎಂದು ಅಲ್ಲಿಗೂ ತೆರಳಿದ್ದಾನೆ. ಅಲ್ಲಿಯೂ ಚಿಕಿತ್ಸೆ ದೊರೆಯಲ್ಲ ಎನ್ನುವುದನ್ನು ಅರಿತು ಸಂಕಷ್ಟ ಎದುರಿಸಿದ್ದಾನೆ. ಸಿಕ್ಕ ಸಿಕ್ಕವರನ್ನು ವಿಚಾರಿಸಿ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುತ್ತೆ ಎಂದು ಕೇಳಿಕೊಂಡಿದ್ದಾನೆ. ಕೊನೆಗೆ ಹುಬ್ಬಳ್ಳಿಯಲ್ಲಿ ಚಿಕಿತ್ಸೆಗೆ ಅವಕಾಶವಿದೆ ಎಂದು ತಿಳಿದು ಅಲ್ಲಿಗೂ ತೆರಳಿದ್ದಾನೆ.
ಖಾಸಗಿ ಆಸ್ಪತ್ರೆಗೆ ತೆರಳಿದರೆ ಅಲ್ಲಿಯೂ ಚಿಕಿತ್ಸೆಗೆ ದಾಖಲಾಗಲು ಮುಂದಾಗಿದ್ದಾನೆ. ಅಲ್ಲಿಯೂ ಆತನಿಗೆ ಚಿಕಿತ್ಸೆ ದೊರೆತಿಲ್ಲ. ಕೊನೆಗೆ ದಿಕ್ಕೇ ತೋಚದಂತಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ತೆರಳಿದ್ದಾನೆ. ವಿಚಿತ್ರ ಎಂಬಂತೆ ಅಲ್ಲಿನ ವೈದ್ಯರು ನೀವು ನಿಮ್ಮ ಜಿಲ್ಲೆಯ ಜಿಲ್ಲಾಧಿಕಾರಿ ಅವರಿಂದ ಪ್ರಮಾಣೀಕೃತ ಪತ್ರ ತಂದರೆ ಮಾತ್ರ ಕಿಮ್ಸ್‌ಗೆ ದಾಖಲಿಸಿಕೊಳ್ಳುವುದಾಗಿ ಹೇಳಿದ್ದಾರೆ. ಇದರಿಂದ ಆತನಿಗೆ ಜೀವವೇ ಹೋದಂತಾಗಿದೆ.
ಜಿಲ್ಲಾಸ್ಪತ್ರೆ ಅಧಿಕಾರಿಗಳ ಎಡವಟ್ಟು: ಫಂಗಸ್ ಸೋಂಕಿತ ವ್ಯಕ್ತಿಗಳನ್ನು ಬೇರೆ ಆಸ್ಪತ್ರೆಗಳಿಗೆ ಕಳುಹಿಸಿ ಕೊಡುವ ಮೊದಲು ಜಿಲ್ಲಾಧಿಕಾರಿ ಅವರಿಂದ ಪ್ರಮಾಣಿಕೃತ ಪತ್ರದ ಜೊತೆ ಕಳುಹಿಸಬೇಕು. ಆದರೆ ಜಿಲ್ಲಾಸ್ಪತ್ರೆಯಲ್ಲಿನ ಆಡಳಿತ ಮಂಡಳಿ ಈ ಬಗ್ಗೆ ಕಾಳಜಿ ವಹಿಸಿಲ್ಲ. ಸುಮ್ಮನೇ ಆಸ್ಪತ್ರೆಯ ಒಂದು ಪತ್ರ ಕೊಟ್ಟು ಕಳುಹಿಸಿಕೊಟ್ಟಿದ್ದಾರೆ. ಜಿಲ್ಲಾಸ್ಪತ್ರೆಯ ಅಧಿಕಾರಿಗಳು ಸೋಂಕಿತ ವ್ಯಕ್ತಿಗೆ ಪೂರ್ಣ ಮಾಹಿತಿ ನೀಡಿ ಕಳುಹಿಸಿಕೊಟ್ಟಿಲ್ಲ. ಇವರ ಎಡವಟ್ಟಿನ ನಾಲ್ಕು ದಿನಗಳ ಕಾಲ ಈ ವ್ಯಕ್ತಿಯು ಆಸ್ಪತ್ರೆ ಆಸ್ಪತ್ರೆ ಅಲೆದಾಡುವಂತ ಸ್ಥಿತಿ ಎದುರಾಗಿದೆ. ಜಿಲ್ಲಾಸ್ಪತ್ರೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕೊನೆಗೂ ಕೊಪ್ಪಳದ ಜನಪ್ರತಿನಿಧಿಗಳ, ಮಾಧ್ಯಮ ಪ್ರತಿನಿಧಿಗಳ ಗಮನಕ್ಕೆ ಈ ವಿಷಯ ತಿಳಿದು ಜಿಲ್ಲಾಮಟ್ಟದ ಅ ಧಿಕಾರಿಗಳ ಗಮನಕ್ಕೂ ತಲುಪಿದೆ. ಅಧಿಕಾರಿಗಳು ಎಚ್ಚೆತ್ತು ಕಿಮ್ಸ್ ಅ ಧಿಕಾರಿಗಳೊಂದಿಗೆ ಮಾತನಾಡಿ, ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ.