ಶಿವಮೊಗ್ಗ: ಕೋವಿಡ್-19 ಸೋಂಕಿಗೆ ತತ್ತರಿಸಿರುವ ರಾಜ್ಯದಲ್ಲಿ ಕಪ್ಪು ಶಿಲೀಂದ್ರ ಕಾಟವೂ ಹೆಚ್ಚುತ್ತಿದೆ. ಇದೀಗ ಮಲೆನಾಡು ಜಿಲ್ಲೆ ಶಿವಮೊಗ್ಗ ಜಿಲ್ಲೆಗೂ ಬ್ಲಾಕ್ ಫಂಗಸ್ ಕಾಲಿಟ್ಟಿದೆ.
ಶಿವಮೊಗ್ಗ ಮಾತ್ರವಲ್ಲದೇ ಹಾವೇರಿ, ದಾವಣಗೆರೆಯಿಂದ ಬಂದವರಲ್ಲಿ ಬ್ಲಾಕ್ ಫಂಗಸ್ ಲಕ್ಷಣಗಳು ಕಂಡುಬರುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಮೂರು ಜನರಿಗೆ ಬ್ಲಾಕ್ ಫಂಗಸ್ ಇರುವುದು ಧೃಡವಾಗಿದೆ. ಉಳಿದ 10 ಮಂದಿಯ ವರದಿಗಾಗಿ ಕಾಯಲಾಗುತ್ತಿದೆ.
ಪ್ರಸ್ತುತ ಬೆಂಗಳೂರು ಮತ್ತು ಮಂಗಳೂರಿಗೆ ಶಿವಮೊಗ್ಗದಿಂದ ಬ್ಲಾಕ್ ಫಂಗಸ್ ಚಿಕಿತ್ಸೆಗೆ ಇಲಾಖೆ ಕಳುಹಿಸುತ್ತಿದೆ. ಸರ್ಕಾರ ಬ್ಲಾಕ್ ಫಂಗಸ್ ಚಿಕಿತ್ಸೆಗೆ ಶಿವಮೊಗ್ಗದ ಮೆಡಿಕಲ್ ಕಾಲೇಜನ್ನು ಸಹ ನಿಗದಿ ಮಾಡಿತ್ತು. ಆದರೆ ಈವರೆಗೆ ಮೆಡಿಕಲ್ ಕಾಲೇಜಿನಲ್ಲಿ ವಾರ್ಡ್ ಮಾತ್ರ ಸಿದ್ದವಾಗಿದೆ. ಬ್ಲಾಕ್ ಫಂಗಸ್ ಚಿಕಿತ್ಸೆಗೆ ಸೂಕ್ತ ಔಷಧಿ ಇನ್ನೂ ಜಿಲ್ಲೆಗೆ ಬಾರದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಬೇರೆಡೆಗೆ ಕಳುಹಿಸುತ್ತಿದ್ದಾರೆ.
ಇದನ್ನೂ ಓದಿ:ಡಿಸಿಗಳಿಂದ ಮಾಹಿತಿ ಸಂಗ್ರಹಿಸಲು ಅಡ್ಡಿ;ಹಕ್ಕುಚ್ಯುತಿನಿರ್ಣಯ ಮಂಡನೆಗೆ ನಿರ್ಧಾರ:ಸಿದ್ದರಾಮಯ್ಯ
ಆದೇಶ ಉಲ್ಲಂಘನೆ: ಬ್ಲಾಕ್ ಫಂಗಸ್ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳಿಂದ ಸಹ ಸರ್ಕಾರದ ಆದೇಶ ಉಲ್ಲಂಘನೆಯಾಗುತ್ತಿದೆ. ಬ್ಲಾಕ್ ಫಂಗಸ್ ಪತ್ತೆಯಾದರೆ ಅಲ್ಲೇ ಚಿಕಿತ್ಸೆ ನೀಡುವಂತೆ ಸರ್ಕಾರ ಸೂಚನೆ ನೀಡಿತ್ತು. ಆದರೆ ಖಾಸಗಿ ಆಸ್ಪತ್ರೆಗಳು ಲಕ್ಷಣ ಪತ್ತೆಯಾದವರನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸುತ್ತಿವೆ.