ಮಂಗಳೂರು: ತೆಂಗು ಬೆಳೆಯನ್ನು ಬಾಧಿಸುವ ಕಪ್ಪುತಲೆ ಕಂಬಳಿ ಹುಳ(ಕ್ಯಾಟರ್‌ಪಿಲ್ಲರ್)ಗಳ ಕಾಟವು ಫೆಬ್ರವರಿಯಿಂದ ಮೇ ವರೆಗೆ ಅಧಿಕವಾಗಿರುತ್ತಿದ್ದು ಅವುಗಳ ಸಮಗ್ರ ನಿರ್ವಹಣೆಗೆ ಏನೇನು ಕ್ರಮಗಳನ್ನು ಅಳವಡಿಸಿಕೊಳ್ಳಬಹುದು ಎಂದು ಸಸ್ಯ ವಿಜ್ಞಾನಿಗಳು ತಿಳಿಸಿದ್ದಾರೆ.
ತೀವ್ರವಾಗಿ ಬಾಧಿಸಿರುವ ತೆಂಗಿನ ಮರಗಳ ಹೊರವರ್ತುಲದ 2 ಅಥವಾ 3 ಗರಿಗಳನ್ನು ಕಡಿಯುವುದು. ಉಳಿದ ಗರಿಗಳಿಗೆ ಕ್ಲೋರಂಟ್ರಿನೀಲಿಪ್ರೋಲ್ 18.5% ಇ.ಸಿ.ಯನ್ನು 0.1ಮಿ.ಲೀ. ಅಥವಾ ಕ್ವಿನಲೊಧೀಸ್ 25 % ಇ.ಸಿ.ಯನ್ನು 2 ಮಿ.ಲೀ. ಅಥವಾ ಮ್ಯಾಲಥಿಯಾನ್ 50% ಇಸಿಯನ್ನು 1 ಮಿ.ಲೀ. ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಗರಿಗಳಿಗೆ ಸಿಂಪಡಣೆ ಮಾಡಬೇಕು.
ಕೀಟನಾಶಕ ಸಿಂಪಡಣೆ ಮಾಡಿದ ಮೂರು ವಾರಗಳ ಅನಂತರ ಕ್ಯಾಟರ್‌ಪಿಲ್ಲರ್‌ಗಳನ್ನು ನಾಶ ಮಾಡುವ ಪರಾವಲಂಬಿ ಕೀಟಗಳಾದ ಗೊನಿಯೋಸಸ್ ನೆಫಂಟಿಡಿಸ್ ಅಥವಾ ಬ್ರೇಕನ್ ಬ್ರೇವಿ ಕ್ರೋನಿಸ್ ಜೀವಿಗಳನ್ನು ಪ್ರತೀ ಮರಕ್ಕೆ 15ರಿಂದ 20ರಷ್ಟು ಬಿಡುಗಡೆ ಮಾಡಬಹುದು. ಪರಾವಲಂಬಿ ಜೀವಿಗಳು ತೋಟಗಾರಿಕೆ ಇಲಾಖೆ ತುಂಬೆಯಲ್ಲಿ ಲಭ್ಯವಿದ್ದು ರೈತರು ಪಡೆದುಕೊಳ್ಳಬಹುದು.
ಈ ಕೀಟವು ಸಮುದ್ರ ಹಾಗೂ ನದಿ ತೀರ ಪ್ರದೇಶದ ತೆಂಗಿನ ತೋಟಗಳಲ್ಲಿ ಹೆಚ್ಚಾಗಿ ಕಂಡು ಬರುವುದಲ್ಲದೆ ಶೇ. 80ರಿಂದ 95ರಷ್ಟು ಗರಿಗಳ ನಾಶ ಮತ್ತು ಶೇ.45ರಿಂದ 50ರಷ್ಟು ತೆಂಗಿನ ಕಾಯಿಗಳ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.
ಸಾಮಾನ್ಯವಾಗಿ ಈ ಕೀಟದ ಮರಿ ಹುಳುಗಳು ಗರಿಗಳ ಆಡಿ ಭಾಗಗಳಲ್ಲಿ ನೂಲಿನಂತಹ ಗೂಡನ್ನು ರಚಿಸಿಕೊಂಡು ಎಲೆಗಳ ಪತ್ರ ಹರಿತ್ತನ್ನು ತಿನ್ನುವುದರಿಂದ ದ್ಯುತಿಸಂಶ್ಲೇಷಣೆ ಪ್ರಕ್ರಿಯೆಗೆ ತೊಂದರೆಯಾಗುತ್ತದೆ. ಕೀಟದ ಜೀವನಚಕ್ರವು (ಮೊಟ್ಟೆಯಿಂದ ಪತಂಗದ ವರೆಗೂ) 2ರಿಂದ 2.5 ತಿಂಗಳಲ್ಲಿ ಪೂರ್ತಿಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ| ಕೇದಾರನಾಥ (9482147325) ಅವರನ್ನು ಸಂಪರ್ಕಿಸಬಹುದು.
ಕ್ಯಾಟರ್‌ಪಿಲ್ಲರ್ ಹುಳಗಳ ಕಾಟದ ಬಗ್ಗೆ ಉದಯವಾಣಿಯು ಮೇ 18ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.