Advertisement

ಪಾಲಿಕೆ ಸಭೆಯಲ್ಲಿ ರಾಜಕೀಯದ ಕಾರ್ಮೋಡ

12:37 AM Jul 10, 2019 | Lakshmi GovindaRaj |

ಬೆಂಗಳೂರು: ಪ್ರಸಕ್ತ ರಾಜ್ಯರಾಜಕಾರಣದಲ್ಲಿ ಬೆಳವಣಿಗೆಗಳ ನೆರಳು ಮಹಾನಗರಪಾಲಿಕೆ ಮೇಲೂ ಬಿದ್ದಿದೆ. ಮಂಗಳವಾರ ಚುಕ್ಕಿ ಗುರುತಿನ ಪ್ರಶ್ನೆಗಳ ವಿಶೇಷ ಕೌನ್ಸಿಲ್‌ ಸಭೆ ಆಡಳಿತ ಮತ್ತು ವಿರೋಧ ಪಕ್ಷಗಳ ಘೋಷಣೆ ಮತ್ತು ಪ್ರತಿಭಟನೆಯಿಂದ “ಪ್ರಶ್ನೆ’ಯಾಗೇ ಉಳಿಯುವಂತಾಗಿದೆ.

Advertisement

ಮೇಯರ್‌ ಗಂಗಾಂಬಿಕೆ ಅವರು ಅಧಿಕಾರ ಸ್ವೀಕರಿಸಿದ ಮೇಲೆ ಒಮ್ಮೆಯೂ ಚುಕ್ಕಿ ಪ್ರಶ್ನೆಗಳ ಬಗ್ಗೆ ಚರ್ಚೆ ಮಾಡಿಲ್ಲ. ಇದೇ ಮೊದಲ ಬಾರಿ ಈ ಬಗ್ಗೆ ಚರ್ಚೆ ಮಾಡಲು ವಿಶೇಷ ಕೌನ್ಸಿಲ್‌ ಸಭೆಯನ್ನು ಮಂಗಳವಾರ ಕರೆಯಲಾಗಿತ್ತು. ಈ ಸಭೆಯಲ್ಲಿ ಟಿಡಿಆರ್‌ (ಆಸ್ತಿ ಹಕ್ಕು ವಿತರಣೆ), 14ನೇ ಹಣಕಾಸು ಆಯೋಗದ ಅನುದಾನದ ಬಳಕೆಯ ವಿನಿಯೋಗ ಮತ್ತು ಇದನ್ನು ಯಾವುದಕ್ಕೆಲ್ಲ ಬಳಸಲಾಗಿದೆ ಎನ್ನುವ ಬಗ್ಗೆ ಚರ್ಚೆ ನಡೆಯಬೇಕಿತ್ತು.

ಆದರೆ, ಸಭೆ ಆರಂಭವಾಗುತ್ತಿದ್ದಂತೆ ಪಾಲಿಕೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು. ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಮಾತು ಪ್ರಾರಂಭಿಸುತ್ತಿದ್ದಂತೆ ಲಗ್ಗೆರೆಯ ಪಾಲಿಕೆ ಸದಸ್ಯ ವೇಲು ನಾಯ್ಕರ್‌, “ನಮ್ಮ ಕ್ಷೇತ್ರದ ಶಾಸಕರನ್ನು ವಾಪಸ್‌ ಕರೆಸಿಕೊಡಿ, ಕ್ಷೇತ್ರಕ್ಕೆ ಅಪ್ಪ ಅಮ್ಮ ಇಲ್ಲದಂತಾಗಿದೆ. ರಾತ್ರಿಯಿಂದ ನಾವು ಊಟ ಮಾಡಿಲ್ಲ, ಅವರಿಗೆ ಏನು ಬೇಕೊ ಎಲ್ಲವನ್ನೂ ಕೊಟ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆ’ ಎಂದು ಮೇಯರ್‌ ಬಳಿ ಮನವಿ ಮಾಡಿದರು.

ಶೇಮ್‌.. ಶೇಮ್‌: ಇದಕ್ಕೆ ಧ್ವನಿ ಗೂಡಿಸಿದಆಡಳಿತ ಪಕ್ಷದ ಪಾಲಿಕೆ ಸದಸ್ಯರು ಸದನದ ಬಾವಿಗಿಳಿದು, “ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ, ಬಿಜೆಪಿ ಕುದುರೆ ವ್ಯಾಪಾರ ನಡೆಸುತ್ತಿದೆ, ಆಮಿಷವೊಡ್ಡಿ ರಾಜೀನಾಮೆ ಕೊಡಿಸುತ್ತಿದ್ದಾರೆ. ಭ್ರಷ್ಟ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ’ಎಂದು ಘೋಷಣಾ ಫ‌ಲಕಗಳನ್ನು ಹಿಡಿದು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು. ಇದಕ್ಕೆ ಪ್ರತಿ ಪಕ್ಷದ ಸದಸ್ಯರು “ಆಡಳಿತವೂ ನಿಮ್ಮದೇ, ಸರ್ಕಾರವೂ ನಿಮ್ಮದೆ ನಾಚಿಕೆಯಾಗಬೇಕು. ರೂಲಿಂಗ್‌ ಪಾರ್ಟಿ ಶೇಮ್‌ ಶೇಮ್‌ ಎಂದು ಮೇಜು ಕುಟ್ಟಿ ವ್ಯಂಗ್ಯವಾಡಿದರು. ರೂಲಿಂಗ್‌ ಪಾರ್ಟಿ ಡೌನ್‌ ಡೌನ್‌, ಕಾಂಗ್ರೆಸ್‌ ಗೋವಿಂದಾ…ಗೋವಿಂದ, ಜೆಡಿಎಸ್‌ ಗೋವಿಂದ ಗೋವಿಂದ’ಎಂದು ಘೋಷಣೆ ಕೂಗಿದರು. “ನಿಮ್ಮ ಪಕ್ಷಯಾವ ರೀತಿಯಲ್ಲಿ ಆಡಳಿತ ನಡೆಸುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿ’ ಎಂದು ಆಡಳಿತ ಪಕ್ಷದ ಸದಸ್ಯರನ್ನು ಕಿಚಾಯಿಸಿದರು.

ಸಭೆ ಮುಂದೂಡಿಕೆ: ಈ ಹಂತದಲ್ಲಿ”ಚುಕ್ಕಿ ಪ್ರಶ್ನೆಗಳ ಬಗ್ಗೆ ಚರ್ಚೆಯಾಗಬೇಕಿದೆ ದಯವಿಟ್ಟು ಕುಳಿತುಕೊಳ್ಳಿ ಎಂದು ಮೇಯರ್‌ ಮೂರು ಬಾರಿ ಮನವಿ ಮಾಡಿದರು. ಹಲವು ಬಾರಿ ಬೆಲ್‌ ಮಾಡಲಾಯಿತು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಘೋಷಣೆಗಳು ನಿಲ್ಲದಿದ್ದಾಗ “ಸಭೆಯನ್ನು ನಾಳೆಗೆ ಮುಂದೂಡಲಾಗಿದೆ’ಎಂದು ಗಂಗಾಂಬಿಕೆ ಘೋಷಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್‌, ಸಭೆ ಹತೋಟಿಗೆ ಬರದ ಕಾರಣ ನಾಳೆಗೆ ಮುಂದೂಡಲಾಯಿತು. ಮೇಯರ್‌ ಸ್ಥಾನದಲ್ಲಿರುವಾಗ ಎಲ್ಲ ಸದಸ್ಯರನ್ನು ಒಂದೇ ರೀತಿಯಲ್ಲಿ ನೋಡಬೇಕಾಗುತ್ತದೆ. ಗದ್ದಲವನ್ನು ನಿಯಂತ್ರಿಸುವ ಪ್ರಮಾಣಿಕ ಪ್ರಯತ್ನವನ್ನು ಮಾಡಿದ್ದೇನೆ’ಎಂದು ಹೇಳಿದರು.

Advertisement

ತಟಸ್ಥವಾಗಿ ಉಳಿದ ಸದಸ್ಯೆ: ಪಾಲಿಕೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದ ಪ್ರತಿಭಟಿಸುತ್ತಿರುವಾಗ ಜೆಡಿಎಸ್‌ನ ಪಾಲಿಕೆ ಸದಸ್ಯೆ ಎಸ್‌.ಪಿ ಹೇಮಲತಾ (ಶಾಸಕ ಗೋಪಾಲಯ್ಯ ಪತ್ನಿ) ಕುರ್ಚಿಯಲ್ಲೇ ಕುಳಿತಿದ್ದರು. ಪತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಹೇಮಲತಾ ಅವರನ್ನು ಉಭಯ ಸಂಕಟಕ್ಕೆ ದೂಡಿದೆ!

ಆಡಳಿತ ಪಕ್ಷದವರ್ಯಾರಾದ್ರೂ ಧರಣಿ ಮಾಡ್ತಾರೇನ್ರಿ!: ಪಾಲಿಕೆಯಲ್ಲಿ ಆಡಳಿತ ಪಕ್ಷದ ನಾಯಕರೇ ಪ್ರತಿಭಟನೆ ಮಾಡಿರುವುದನ್ನು ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ವಿರೋಧಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ,”ಇದೇ ಮೊದಲ ಬಾರಿಗೆ ಪಾಲಿಕೆಯಲ್ಲಿ ಆಡಳಿತ ಪಕ್ಷದ ಸದಸ್ಯರೇ ಪ್ರತಿಭಟನೆ ನಡೆಸಿದ್ದಾರೆ. ಮೇಯರ್‌ ಗಂಗಾಂಬಿಕೆ ಮತ್ತು ಆಡಳಿತ ಪಕ್ಷದ ನಾಯಕರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಚುಕ್ಕೆ ಪ್ರಶ್ನೆಯ ಬಗ್ಗೆ ಉತ್ತರಿಸುವುದರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿದ್ದಾರೆ. ಟಿಡಿಆರ್‌ನಲ್ಲಿ ಬಹುಕೋಟಿ ಹಗರಣ ನಡೆದಿದ್ದು, ಅದು ಬೆಳಕಿಗೆ ಬರುತ್ತದೆ ಎನ್ನುವ ಆತಂಕದಿಂದ ಪ್ರತಿಭಟಿಸಿದ್ದಾರೆ ಎಂದು ಆರೋಪಿಸಿದರು.

ಮೇಯರ್‌ ಸದಸ್ಯರನ್ನು ಹತೋಟಿಗೆ ತರಬೇಕಾಗಿತ್ತು. ಆದರೆ, ಆ ಪ್ರಯತ್ನವನ್ನು ಮಾಡಲಿಲ್ಲ. ಆಡಳಿತ ಪಕ್ಷದ ಸದಸ್ಯರನ್ನು ವಜಾಗೊಳಿಸಬೇಕಿತ್ತು. ಈ ವರ್ತನೆಯನ್ನು ಬಿಜೆಪಿ ಖಂಡಿಸುತ್ತದೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಆಡಳಿತ ಪಕ್ಷ ಒಂದೇ ಒಂದು ದಿನ ಆಡಳಿತ ನಡೆಸುವ ನೈತಿಕತೆ ಉಳಿಸಿಕೊಂಡಿಲ್ಲ. ಪ್ರತಿ ವರ್ಷವೂ ಬೋಗಸ್‌ ಮತಗಳ ಮೂಲಕ ಅಧಿಕಾರ ಹಿಡಿಯುತ್ತಿದ್ದಾರೆ. ಈ ವರ್ಷವೂ ಅಕ್ರಮವಾಗಿ ನಾಲ್ವರು ವಿಧಾನಪರಿಷತ್‌ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ನಡುವೆ ಶಾಸಕರು ರಾಜೀನಾಮೆ ನೀಡಿರುವುದು ಆಡಳಿತ ಪಕ್ಷದ ಸದಸ್ಯರನ್ನು ಕಂಗೆಡಿಸಿದೆ ಎಂದರು.

ಸೇರಿಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿಲ್ಲ!: ಒಂದು ಊರಿನಲ್ಲಿ ಕೋಳಿಯನ್ನು ಹಿಡಿದರೇ ಅದು ಎಲ್ಲಿ ಹೋಗುತ್ತದೆ ಎಂದು ತಿಳಿಯುತ್ತದೆ. ಶಾಸಕರ ಬಗ್ಗೆ ತಿಳಿಯುವುದಿಲ್ಲವೇ?. ಎಸ್‌.ಟಿ ಸೋಮಶೇಖರ್‌, ಬೈರತಿ ಬಸವರಾಜು ಮತ್ತು ಮುನಿರತ್ನ ಅವರು ಬಿಜೆಪಿಗೆ ಬಂದರೆ ಸೇರಿಸಿಕೊಳ್ಳುತ್ತಿರಾ ಎನ್ನುವ ಪ್ರಶ್ನೆಗೆ, “ಅವರು ನಮ್ಮ ಪಕ್ಷಕ್ಕೆ ಸೇರಿಲ್ಲ, ಆ ಪ್ರಶ್ನೆ ನಮ್ಮ ಮುಂದಿಲ್ಲ. ಸಿದ್ದರಾಮಯ್ಯ ಅವರು ಅವರ ಅಪ್ಪನಾಣೆ ಎಚ್‌ಡಿ. ಕುಮಾರಸ್ವಾಮಿ ಸಿ.ಎಂ ಆಗುವುದಿಲ್ಲ ಎಂದಿದ್ದರು ಅವರೇ ಹೋಗಿ ಕರೆದುಕೊಂಡು ಬಂದರು’ ಎಂದು ಉದಾಹರಣೆ ನೀಡಿದರು. ಅತೃಪ್ತ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತೀರಾ, ಅಥವಾ ಇಲ್ಲವಾ ಎಂಬ ಪ್ರಶ್ನೆಗೆ ಆ ಪ್ರಶ್ನೆ ನಮ್ಮ ಮುಂದೆ ಇಲ್ಲ, ಈ ಬಗ್ಗೆ ರಾಜ್ಯ ಮಟ್ಟದ ನಾಯಕರು ನೋಡಿಕೊಳ್ಳುತ್ತಾರೆ ಎಂದು ಜಾರಿಕೊಂಡರು.

“ಪ್ರಶ್ನೆ’ಯಾಗೇ ಉಳಿದ ಚುಕ್ಕಿ ಪ್ರಶ್ನೆ: ಆರ್‌ಟಿಐ ಕಾಯ್ದೆಯಷ್ಟೇ ಮಹತ್ವವನ್ನು “ಚುಕ್ಕಿ ಪ್ರಶ್ನೆ’ಗಳಿಗೆ ನೀಡಲಾಗುತ್ತದೆ. ಕೆಎಂಸಿ ಕಾಯ್ದೆಯ ಪ್ರಕಾರ ಪ್ರತಿ ತಿಂಗಳೂ ಚುಕ್ಕಿ ಪ್ರಶ್ನೆಗಳ ಬಗ್ಗೆ ಚರ್ಚೆ ನಡೆಯಬೇಕು. ಆದರೆ, ಮೇಯರ್‌ ಅಧಿಕಾರ ಸ್ವೀಕರಿಸಿ ಏಳೆಂಟು ತಿಂಗಳು ಕಳೆದರೂ ಒಮ್ಮೆಯೂ ಚುಕ್ಕಿ ಪ್ರಶ್ನೆಯ ಬಗ್ಗೆ ಚರ್ಚೆಗಳು ನಡೆದಿಲ್ಲ. ಮೊದಲ ಚುಕ್ಕಿ ಪ್ರಶ್ನೆಯ ಸಭೆಯೂ ಪ್ರತಿಭಟನೆಗೆ ಬಲಿಯಾದ ಕಾರಣ ಮತ್ತೆ ಚುಕ್ಕಿ ಪ್ರಶ್ನೆ ಸಭೆ ಯಾವಾಗ ನಡೆಯಲಿದೆ ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next