Advertisement

ಕಪ್ಪು ಗುಪ್ಪಿ  

12:30 AM Feb 16, 2019 | |

ಬಿಟರಿನ್‌ ಅಂದರೆ ಏನು ಗೊತ್ತಾ? ಉಪ್ಪು ತಯಾರಿಸುವಲ್ಲಿ ಹರಿಯುವ ಕೆಸರು,  ಕಪ್ಪು ನೀರು ಎಂಬ ಅರ್ಥ ಇದೆ.Black Bittern  (Dupetor flavicollis) RM – Village hen  +  
ಈ ಬಿಟರಿನ್‌ ಕೊಕ್ಕರೆಯನ್ನು ಕನ್ನಡದಲ್ಲಿ ಗುಪ್ಪಿ ಎನ್ನುತ್ತಾರೆ.  ಗುಪ್ಪಿ ಅಂದರೆ ಬೆನ್ನನ್ನು ಬಗ್ಗಿಸಿ ಕುಳಿತು ಕೊಳ್ಳುವ ಕೊಕ್ಕರೆ.  ಕೆಸರು ನೆಲೆ, ಗಜನೀ,  ಕೆಸರು ತುಂಬಿದ ಹಸಿರು ಜಲಸಸ್ಯ ಮತ್ತು ಜೊಂಡು ಹುಲ್ಲು ಬೆಳೆಯುವ ಪ್ರದೇಶದಲ್ಲಿ ಈ ಹಕ್ಕಿ ಕಾಣಸಿಗುತ್ತದೆ.  ಹಳ್ಳಿಗರು ಇದನ್ನು ಕಪ್ಪು ಬಕ ಎಂಬ ಹೆಸರಿನಿಂದ ಕರೆಯುತ್ತಾರೆ. 

Advertisement

ಇದು ಧ್ಯಾನಸಕ್ತವಾಗಿರುವಂತೆ ಕುಳಿತಿರುತ್ತದೆ.  ಮೀನು, ಕೆಸರಿನ ಹುಳು, ಏಡಿ ಬರುವವರೆಗೆ ಕಾದು ಕುಳಿತು -ಭರ್ಚಿಯಂತಿರುವ ತನ್ನ ಕೊಕ್ಕನ್ನು ಚಾಚಿ ಬೇಟೆಯಾಡುವುದು ಈ ಪಕ್ಷಿಯ ವಿಶೇಷ.  ಹಿಡಿದ ಬೇಟೆಯನ್ನು ಹಾರಿಸಿ, ತಿರುಗಿಸಿ -ಮುಖಭಾಗ ಮುಂದೆ ಬರುವಂತೆ ಮಾಡಿ -ತಲೆಭಾಗದಿಂದ ನುಂಗುವುದು ಇದರ ಬೇಟೆಯ ಪರಿ.  ಕೆಸರು ಗುಪ್ಪಿ, ಚಿಕ್ಕ ಗುಪ್ಪಿ, ಮಣ್ಣು ಕೆಂಪನ ಗುಪ್ಪಿ, ದೊಡ್ಡ ಗುಪ್ಪಿ ಎಂಬ ಪ್ರಬೇಧ ಈ ಗುಪ್ಪಿ ಕುಟುಂಬದಲ್ಲಿದೆ. 

ಈ ಹಕ್ಕಿ ಒಳನಾಡಿನ ಪ್ರದೇಶದಲ್ಲಿ ಭತ್ತದ ಗದ್ದೆ, ಇಲ್ಲವೇ ಚಿಕ್ಕ ಝರಿಗಳ ಆಜು ಬಾಜು ಸಹ ಕಾಣುತ್ತವೆ. ಇದು ಕೊಳದ ಕೊಕ್ಕರೆಯಷ್ಟು ಗಾತ್ರ ಇರುತ್ತದೆ.  ರೆಕ್ಕೆಯ ಅಗಲ 73.5 ರಿಂದ 80 ಸೆಂ.ಮೀ.  200 ರಿಂದ 420 ಗ್ರಾಂ. ಭಾರ ಇರುವ ಹಕ್ಕಿಯೂ ಈ ಸಂಕುಲದಲ್ಲಿದೆ.  ದಟ್ಟ ಬೂದು ಗಪ್ಪಿನಿಂದ- ಅಚ್ಚ ಕಪ್ಪು ಬಣ್ಣದ ಗುಪ್ಪಿಯೂ ಇದೆ. ಕುತ್ತಿಗೆಯಭಾಗದಲ್ಲಿ ಮಸಕು ಬಣ್ಣದ ಗೆರೆ ಇರುವುದು ಸೂಕ್ಷ್ಮವಾಗಿ ಗಮನಿಸಿದಾಗ ಕಾಣುತ್ತದೆ.  ತಲೆ ಭಾಗದಿಂದ ಕೆನ್ನೆಯ ಕೆಳಭಾಗದವರೆಗೂ ತಿಳಿ ಹಳದಿ ಮಚ್ಚೆ ಇದನ್ನು ಗುರುತಿಸುವಲ್ಲಿ ಸಹಕಾರಿಯಾಗಿದೆ. ಹೆಣ್ಣು ಹಕ್ಕಿ -ಗಂಡು ಹಕ್ಕಿಗಿಂತ ತಿಳಿ ಮತ್ತು ಮುಸಕು ಬಣ್ಣದಿಂದ ಕೂಡಿರುತ್ತದೆ.  ಹೊಟ್ಟೆ, ಎದೆ ಭಾಗದಲ್ಲಿ ತಿಳಿ ಹಳದಿ ಛಾಯೆಯ ಬಣ್ಣ ಇರುವುದೇ ಈ ಹಕ್ಕಿಯ ವಿಶೇಷ.

ಇದೇ ಕಪ್ಪು ಗುಪ್ಪಿ ಅನ್ನೋದನ್ನು ಅದರ ಕೆನ್ನೆಯ ಮೇಲಿನ ತಿಳಿ ಮಸಕು ಹಳದಿ ಬಣ್ಣದಿಂದ ಗುರುತಿಸಬಹುದು. ಕೂಗಿನ ಆರಂಭ  ದೀರ್ಘ‌ವಾಗಿರುತ್ತದೆ. ಕೇವಲ ಬಯಲು ಪ್ರದೇಶದಲ್ಲಷ್ಟೆ ಅಲ್ಲ, ದಟ್ಟ ಕಾಡಿನ ನಡುವೆ ಇರುವ ಹುಲ್ಲು ಬೆಳೆವ ಜಾಗ, ಜೌಗು ಪ್ರದೇಶಗಳಲ್ಲೂ ಇದು ವಾಸ ಮಾಡುತ್ತದೆ. 

ಚಳಿಗಾಲದಲ್ಲಿ ಉತ್ತರ ಭಾರತದಲ್ಲಿ ಇದು ಸಾಮಾನ್ಯವಾಗಿ ಕಾಣುತ್ತದೆ. ಬೇಸಿಗೆ ಶುರುವಾದರೆ ಹಿಮಾಲಯದ ತಪ್ಪಲ ಕಡೆಗೆ ಪ್ರಯಾಣ ಬೆಳೆಸುತ್ತದೆ.  ಬೇಟೆ ಈ ಹಕ್ಕಿಯ ಇರುನೆಲೆಯನ್ನು ನಾಶ ಮಾಡುತ್ತಿರುವುದರಿಂದ  ಈ ಹಕ್ಕಿಯ  ಸಂತತಿ ಮೇಲೆ ಪರಿಣಾಮ ಬೀರಿದೆ. ಇದನ್ನು ಮಾಂಸಕ್ಕಾಗಿ ಹಿಡಿಯುವುದರಿಂದಲೂ ಕ್ಷೀಣಿಸುತ್ತಿದೆ.  ಹೀಗೆ ಮಾಡದೇ ಇದರ ಇರುನೆಲೆ ರಕ್ಷಣೆ, ಬೇಟೆ ನಿಷೇಧದಿಂದ ಈ ಅಪರೂಪ ಗುಪ್ಪಿಯನ್ನು ಉಳಿಸಬಹುದು. 

Advertisement

ತೇಲು ಸಸ್ಯ ಮತ್ತು ಜೊಂಡು ಹುಲ್ಲು ಇರುವ ಸ್ಥಳದಲ್ಲಿ ಮರಿಮಾಡುತ್ತದೆ.  ತೇಲು ಸಸ್ಯದ ಗುಂಪು, ಮತ್ತು ಅರ್ಧ ಒಣಗಿದ ತೇಲು ಸಸ್ಯದ ಎಲೆ ಮತ್ತು ಜೊಂಡು ಹುಲ್ಲನ್ನು ಸೇರಿಸಿಅಟ್ಟಣಿಗೆ ನಿರ್ಮಿಸುತ್ತದೆ.  ಅದರಮೇಲೆ ಗೂಡು ಕಟ್ಟುತ್ತದೆ. ಈ ಹಕ್ಕಿ ನೀಲಿ ಇಲ್ಲವೇ ಹಸಿರು ಬಿಳಿ ಗೆರೆಇರುವ 4 ಮೊಟ್ಟೆ ಇಡುತ್ತದೆ.  ತಂದೆ -ತಾಯಿ ಸೇರಿ ರಕ್ಷಣೆ, ಗುಟುಕು ನೀಡುವುದು ಮುಂತಾದ ಕಾರ್ಯ ನಿರ್ವಹಿಸುತ್ತವೆ. ಗಿಡಗಂಟಿ ಇಲ್ಲವೇ ಜೊಂಡು ಹುಲ್ಲಿನ ನಡುವೆ ಗೂಡು ಕಟ್ಟುವುದರಿಂದ ಈ ಹಕ್ಕಿ ಹೊರ ಜಗತ್ತಿಗೆ ಕಾಣುವುದು ಅಪರೂಪ. ಆದರೆ, ಗೂಡಿನ ಸ್ಥಳದ ಸುತ್ತಮುತ್ತಲೇ ಮತ್ತೆ ಮತ್ತೆ  ಗಿರಕಿ ಹೊಡೆಯುವುದರಿಂದ ಕಪ್ಪುಗುಪ್ಪಿಯ ಆವಾಸಸ್ಥಾನ ಇದೇ ಅಂತ ಸುಲಭವಾಗಿ ಗುರುತಿಸಬಹುದು. 

Advertisement

Udayavani is now on Telegram. Click here to join our channel and stay updated with the latest news.

Next