ನವದೆಹಲಿ: ಕೃಷಿ ಕಾಯ್ದೆಯ ಹಿನ್ನೆಲೆಯಲ್ಲಿ ಉಂಟಾಗಿರುವ ರೈತರ ಹಾಗೂ ಕೇಂದ್ರದ ನಡುವಿನ ಬಿಕ್ಕಟ್ಟನ್ನು ಬಗೆಹರಿಸಲು ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ನಾಲ್ಕು ಜನರ ಕಮಿಟಿಯಿಂದ ಹೊರಬರುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್ ತಿಳಿಸಿದ್ದಾರೆ.
ಈ ಸಮಿತಿಯಲ್ಲಿನ ಸದಸ್ಯರು ಈ ಹಿಂದೆ ಕೇಂದ್ರದ ಕೃಷಿ ಕಾಯ್ದೆಯನ್ನು ಸ್ವಾಗತಿಸಿದ್ದರು ಎಂದು ರೈತ ಸಂಘಟನೆಗಳು ಹಾಗೂ ವಿರೋಧಪಕ್ಷಗಳು ಆರೋಪಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:BSY ಭ್ರಷ್ಟಾಚಾರದ CD ಮಾತ್ರವಲ್ಲ; ಸಭ್ಯರು ನೋಡಲಾಗದ ಸಿ.ಡಿ ಕೂಡ ಇವೆ!: ಯತ್ನಾಳ್ ಹೊಸ ಬಾಂಬ್
ಈ ಕುರಿತಾಗಿ ಮಾಹಿತಿ ನೀಡಿರುವ ಭೂಪಿಂದರ್ ಸಿಂಗ್ ಮಾನ್, ನನ್ನನ್ನು ನಾಮನಿರ್ದೇಶನ ಮಾಡಿದ್ದಕ್ಕೆ ಸಮೀತಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ಆದರೆ ನಾನು ರೈತರ ಹಿತಾಸಕ್ತಿಗಾಗಿ ನನ್ನ ಯಾವ ಹುದ್ದೆಯ ಸ್ಥಾನವನ್ನಾದರೂ ತ್ಯಾಗ ಮಾಡಲು ಸಿದ್ಧನಾಗಿದ್ದೇನೆ. ರೈತ ಸಂಘಟನೆ ಹಾಗೂ ವಿರೋಧ ಪಕ್ಷಗಳಲ್ಲಿ ಮೂಡಿರುವ ಅನುಮಾನಗಳನ್ನು ನಿವಾರಿಸಲು ನಾನು ಈ ನಿರ್ಧಾರವನ್ನು ಕೈಗೊಂಡಿದ್ದೇನೆ. ನಾನು ಸದಾ ಪಂಜಾಬ್ ಹಾಗೂ ದೇಶದ ರೈತರ ಜೊತೆಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಕಾರು-ಲಾರಿ ನಡುವೆ ಢಿಕ್ಕಿ: ಓರ್ವ ಸಾವು, ನಾಲ್ವರಿಗೆ ಗಾಯ
ಇತ್ತೀಚೆಗೆ ಸುಪ್ರೀಂ ಕೋರ್ಟ್ ದೇಶದಲ್ಲಿ ನೂತನ ಕೃಷಿ ಕಾಯ್ದೆಯ ವಿರುದ್ಧ ನಡೆಯುತ್ತಿರುವ ರೈತ ಚಳುವಳಿಯ ಹಿನ್ನೆಲೆಯಲ್ಲಿ ಕೃಷಿ ಕಾಯ್ದೆಗಳ ಜಾರಿಗೆ ಮುಂದಿನ ಆದೇಶದವರೆಗೂ ತಡೆ ನೀಡಿದ್ದು, ಸರ್ಕಾರದ ಅಭಿಪ್ರಾಯಗಳನ್ನು ಒಳಗೊಂಡಂತೆ ರೈತರ ಸಲಹೆ ಸೂಚನೆಗಳನ್ನು ಆಲಿಸಲು ನಾಲ್ಕು ಜನ ಸದಸ್ಯರನ್ನು ಒಳಗೊಂಡಿರುವ ಸಮಿತಿಯೊಂದನ್ನು ನೇಮಿಸಿತ್ತು.