ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ನಾಳೆ ( ಅ.17) ನೆರವೇರುವುದರಿಂದ, ಇಂದು ಸಂಜೆಯೇ ವಿಶೇಷ ವಿಮಾನದ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೈಸೂರಿಗೆ ಆಗಮಿಸಿದ್ದಾರೆ.
ಬಳಿಕ ಆರ್. ಆರ್. ನಗರ, ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿ, ಎರಡೂ ಕ್ಷೇತ್ರಗಳನ್ನು ನಾವು ಈಗಾಗಲೇ ಗೆದ್ದಿದ್ದೇವೆ. ಗೆಲುವಿನ ದೊಡ್ಡ ಅಂತರಕ್ಕಾಗಿ ಈಗ ಶ್ರಮಿಸುತ್ತಿದ್ದೇವೆ. ಗೆಲುವಿನಲ್ಲಿ ಯಾವ ಅನುಮಾನಗಳು ಇಲ್ಲ. ಜನರು ನಮ್ಮ ಪರವಾಗಿದ್ದಾರೆ ಎಮದು ತಿಳಿಸಿದರು.
ರಾಜ್ಯ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿರುವ ವಿಚಾರವಾಗಿ ಮಾತನಾಡಿ, ನಾನು ಕೂಡ ಎರಡು-ಮೂರು ದಿನಗಳ ಕಾಲ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡುತ್ತೇನೆ. ಈ ಸಂಬಂಧ ಈಗಾಗಲೇ ಅಲ್ಲಿನ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದೇನೆ. ಈಗಾಗಲೇ ನಮ್ಮ ಕೆಲವು ಸಚಿವರು ಅಲ್ಲಿಗೆ ಹೋಗಿದ್ದಾರೆ, ಇನ್ನು ಕೆಲ ಸಚಿವರೂ ಹೋಗುತ್ತಾರೆ.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಬೇರೆ ಕಾರ್ಯದಲ್ಲಿ ನಿರತರಾಗಿದ್ದರು. ಈಗ ಅವರೂ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಹೋಗುತ್ತಾರೆ. ಜನರ ಜೊತೆಗೆ ಸರ್ಕಾರ ಇದೆ. ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುತ್ತೇವೆ. ಹಣದ ಕೊರತೆ ಇಲ್ಲ, ನೆರೆ ಸಂತ್ರಸ್ತರ ಜೊತೆ ನಾವಿದ್ದೇವೆ ಎಂದು ಹೇಳಿದರು.
5-6 ಜಿಲ್ಲೆಗಳಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಪ್ರವಾಹ ಆಗಿದೆ. ಸಾವಿರಾರು ಮನೆಗಳು, ಅಪಾರ ಪ್ರಮಾಣದ ಬೆಳೆ ಹಾನಿ ಆಗಿದೆ. ಎಲ್ಲ ಜಿಲ್ಲಾಧಿಕಾರಿಗಳ ಬಳಿಯೂ ಹಣ ಇದೆ. ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸುತ್ತೇವೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಮಾತನಾಡಿದ್ದೇನೆ. ಅವರೂ ನೆರವು ನೀಡುವುದಾಗಿ ಹೇಳಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡುತ್ತೇವೆ.
ಪ್ರವಾಹ ವೀಕ್ಷಣೆ ಪ್ರವಾಸ ಮಾಡುವ ಬಗ್ಗೆ ನಾಳೆ ಅಥವಾ ನಾಳಿದ್ದು ತೀರ್ಮಾನ ಮಾಡುತ್ತೇನೆ. ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಹೋಗಿದ್ದಾರೆ. ಕಂದಾಯ ಸಚಿವರು ಹೋದರೆ ಎಲ್ಲರೂ ಹೋದಂತೆ. ಸಮರೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳುತ್ತೇವೆ. ರೈತ ಸಮುದಾಯಕ್ಕೂ ನಮ್ಮ ಮೇಲೆ ವಿಶ್ವಾಸವಿದೆ. ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ನೀಡಿ ಮನೆ ಕಟ್ಟಿಸಿ ಕೊಡುತ್ತೇವೆ. ತಕ್ಷಣವೇ 10 ಸಾವಿರ ರೂ. ತಾತ್ಕಾಲಿಕ ಪರಿಹಾರ ಕೊಡುತ್ತೇವೆ.
ಎನ್‌ಡಿಆರ್‌ಎಫ್‌ನಿಂದ ಕಡಿಮೆ ಹಣ ಬಂದರೂ ನಾವು ಮತ್ತಷ್ಟು ಹಣ ಹಾಕಿ ಮನೆ ಕಟ್ಟಿಸಿಕೊಡುತ್ತೇವೆ. ಪ್ರವಾಹ ನಷ್ಟದ ಅಂದಾಜು ಆಗಿಲ್ಲ. ಒಂದು ವಾರ ಬೇಕು ಅಂತ ಜಿಲ್ಲಾಧಿಕಾರಿಗಳು ಕೇಳಿದ್ದಾರೆ. ಸಮಗ್ರ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆ ಎಂದು ಮೈಸೂರಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.