ಔರಾದ: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಮತದಾರರು ಆಶೀರ್ವಾದ ಮಾಡಿರುವ ಹಿನ್ನೆಲೆಯಲ್ಲಿ ಬುಧವಾರ ಪಟ್ಟಣದ ಕನ್ನಡಾಂಬೆ ವೃತ್ತದ ಬಳಿ ಶಾಸಕ ಪ್ರಭು ಚವ್ಹಾಣ ಸೇರಿದಂತೆ ಇನ್ನಿತರ ಬಿಜೆಪಿ ಮುಖಂಡರು ವಿಜಯೋತ್ಸವ ಆಚರಿಸಿದರು.
ಕಳೆದ ಐದು ವರ್ಷದ ಆಡಳಿತಾವಧಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬೀದರ ಸಂಸದ ಭಗವಂತ ಖೂಬಾ ಮಾಡಿರುವ ಉತ್ತಮ ಕಾರ್ಯ ನೋಡಿ ಜಿಲ್ಲೆಯ ಮತದಾರರು ಬಿಜೆಪಿಗೆ ಗೆಲುವಿನ ಮಾಲೆ ಹಾಕಿದ್ದಾರೆ. ಇದರಿಂದ ನಮ್ಮ ಪಕ್ಷದ ಹಾಗೂ ಸಂಸದ ಭಗವಂತ ಖೂಬಾ ಮೇಲೆ ಜಿಲ್ಲೆಯ ಜನರು ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಉತ್ತಮ ಆಡಳಿತ ನೀಡುವ ಮೂಲಕ ಮತದಾರರ ಋಣ ತೀರಿಸುತ್ತೇವೆ ಎಂದು ಹೇಳಿದರು.
ಕರ್ನಾಟಕದಲ್ಲಿ ಮೈತ್ರಿ ಸರ್ಕಾರಕ್ಕೆ ಹಾಗೂ ಎರಡು ಪಕ್ಷಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಬಗ್ಗೆ ರೈತರು ಹಾಗೂ ನಾಡಿನ ಜನರು ಒಳ್ಳೆಯ ನಂಬಿಕೆ ಇಟ್ಟಿಕೊಂಡಿದ್ದರು. ಆದರೆ ಜನರ ನಿರೀಕ್ಷೆಯಂತೆ ಕುಮಾರಸ್ವಾಮಿ ಕೆಲಸ ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು.
ಕರ್ನಾಟಕದಲ್ಲಿ ಕೂಡ ಕೆಲವೇ ದಿನಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಲಿದೆ. ನಾಡಿನ ಜನರ ನಿರೀಕ್ಷೆಯಂತೆ ರೈತ ನಾಯಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.
ಯಡಿಯೂರಪ್ಪ ಅತಿ ಶೀಘ್ರದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದರು. ಪಟ್ಟಣದ ಕನ್ನಡಾಂಬೆ ವೃತ್ತದ ಬಳಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜಮಾಯಿಸಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು. ಅದರಂತೆ ಸಂಸದ ಭಗವಂತ ಖೂಬಾ ಬಡಾವಣೆಯಲ್ಲಿ ಕೂಡ ಹೆಣ್ಣು ಮಕ್ಕಳು ಸಿಹಿ ಹಂಚಿ ಸಂಭ್ರಮಾಚಣೆ ಮಾಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಸತೀಶ ಪಾಟೀಲ, ಮುಖಂಡ ಬಂಡೆಪ್ಪ ಕಂಟೆ, ಪ್ರಕಾಶ ಅಲ್ಮಾಜೆ, ಸುನೀಲಕುಮಾರ ದೇಶಮುಖ, ಸಚೀನ ರಾಠೊಡ, ವಿಶಾಲ ಪಾಟೀಲ, ದಿನೇಶ ರಾಠೊಡ, ಪ್ರಶಾಂತ ರಾಠೊಡ ಸೇರಿದಂತೆ ಪಕ್ಷದ ಇನ್ನಿತರ ಕಾರ್ಯಕರ್ತರು ಹಾಗೂ ಮುಖಂಡರು ಸೇರಿ ವಿಜಯೋತ್ಸವ ಆಚರಿಸಿದರು.