ಬಂಟ್ವಾಳ: ಬಂಟ್ವಾಳ ಬಿಜೆಪಿ ಅಭ್ಯರ್ಥಿ, ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರು ರವಿವಾರ ಸಂಜೆ ಸಜೀಪಮೂಡ ಗ್ರಾ.ಪಂ.ವ್ಯಾಪ್ತಿಯ ಪಣೋಲಿಬೈಲಿನಿಂದ ಬೊಳ್ಳಾಯಿ ಜಂಕ್ಷನ್‌ವರೆಗೆ ಬಂಟ್ವಾಳ ಬಿಜೆಪಿ ನಾಯಕರು ಹಾಗೂ ಸ್ಥಳೀಯ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿ ಈ ಬಾರಿ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಸ್ಥಳೀಯವಾಗಿರುವ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಸಜೀಪಮೂಡ ಸಮಗ್ರ ಅಭಿವೃದ್ಧಿಗೆ ನೀಡಿರುವ ಅನುದಾನಗಳನ್ನು ವಿವರಿಸಿ ಗ್ರಾಮದ ಇನ್ನಷ್ಟು ಅಭಿವೃದ್ಧಿಗೆ ತನ್ನನ್ನು ಬೆಂಬಲಿಸುವಂತೆ ವಿನಂತಿಸಿದರು. ಈ ವೇಳೆ ಸ್ಥಳೀಯರು ಬಿಜೆಪಿಯನ್ನು ಬೆಂಬಲಿಸುವ ಭರವಸೆಯನ್ನು ನೀಡಿದರು.
ಬಳಿಕ ಮಾತನಾಡಿದ ರಾಜೇಶ್ ನಾೖಕ್ ಅವರು, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಸಾಧಿಸಿದ ಅಭೂತಪೂರ್ವ ಗೆಲುವು ಅದು ಕಾರ್ಯಕರ್ತರ ಗೆಲುವಾಗಿದೆ. ಕಳೆದ 5 ವರ್ಷಗಳಲ್ಲಿ ಪ್ರತಿಯೊಬ್ಬರು ಗೌರವದಿಂದ ನೆಮ್ಮದಿಯ ಜೀವನ ಮಾಡಲು ಸಾಧ್ಯವಾಗಿದೆ. ಅದೇ ರೀತಿಯಲ್ಲಿ ಈ ಬಾರಿಯ ಚುನಾವಣೆಯಲ್ಲೂ ಕ್ಷೇತ್ರದ ಜನತೆ ಮತ್ತೂಮ್ಮೆ ಕಮಲವನ್ನು ಅರಳಿಸುವ ಮೂಲಕ ಕಾಂಗ್ರೆಸ್ ಮುಕ್ತ ಬಂಟ್ವಾಳವನ್ನಾಗಿ ಮಾರ್ಪಾಡು ಮಾಡಬೇಕಿದೆ ಎಂದರು.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಿ.ಸಿ.ರೋಡಿನಲ್ಲಿ ಬೃಹತ್ ರೋಡ್ ಶೋ ನಡೆಸಿದ ಬಳಿಕ ಕ್ಷೇತ್ರದ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಯಾಗಿದ್ದು, ಗೆಲುವಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ರೋಡ್ ಶೋ ಯಶಸ್ಸಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಚಿರಋಣಿಯಾಗಿದ್ದು, ನಿಮ್ಮ ಸೇವೆಗೆ ಸದಾ ಸಿದ್ಧನಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮುಂಬಯಿ ಮಹಾನಗರಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಜಿ.ಶೆಟ್ಟಿ ದಳಂದಿಲ, ಮುಂಬಯಿನ ಉದ್ಯಮಿ, ಪಕ್ಷದ ಮುಂದಾಳು ವಿವೇಕ್ ಶೆಟ್ಟಿ ನಗ್ರಿಗುತ್ತು, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಸಜೀಪ, ಪ್ರಮುಖರಾದ ಪ್ರವೀಣ್ ಗಟ್ಟಿ, ಸುಪ್ರೀತ್ ಆಳ್ವ, ಪುರುಷೋತ್ತಮ ಸಾಲಿಯಾನ್, ಉದಯ ಪೂಜಾರಿ ಕಾಂಜಿಲ, ಉದಯ ಕುಮಾರ್ ರಾವ್,ಚರಣ್ ಜುಮಾದಿಗುಡ್ಡೆ, ಯಶವಂತ ನಾಯ್ಕ ನಗ್ರಿ, ಲೋಹಿತ್ ಪಣೋಲಿಬೈಲು, ವೀರೇಂದ್ರ ಕುಲಾಲ್, ಸೀತಾರಾಮ ಅಗೋಳಿಬೆಟ್ಟು, ಪ್ರಶಾಂತ್ ಪೂಜಾರಿ, ಗಿರೀಶ್ ಕುಲಾಲ್, ಯೋಗೀಶ್ ಪೂಜಾರಿ, ಕೃಷ್ಣ ಭಟ್, ಸುರೇಶ್ ಪೂಜಾರಿ, ಸಜೀಪಮೂಡ, ಸಜೀಪಮುನ್ನೂರು ಗ್ರಾ.ಪಂ.ಗಳ ಸದಸ್ಯರು, ಪಕ್ಷದ ಪದಾಧಿಕಾರಿಗಳು, ಬೂತ್ ಸಮಿತಿ ಪ್ರಮುಖರು, ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಗೆಲ್ಲಿಸಿ ಉತ್ತರ ನೀಡೋಣ
ಕಾಂಗ್ರೆಸ್ ಮಾಡುತ್ತಿರುವ ಎಲ್ಲಾ ಅಪಪ್ರಚಾರಗಳಿಗೂ ಕಾರ್ಯಕರ್ತರು ಬಂಟ್ವಾಳದಲ್ಲಿ ಬಿಜೆಪಿಯನ್ನು ಅತ್ಯಧಿಕ ಮತಗಳ ಅಂತರಗಳ ಗೆಲ್ಲಿಸುವ ಮೂಲಕ ಉತ್ತರ ನೀಡಬೇಕು. ಕಾಂಗ್ರೆಸಿಗರಿಗೆ ಸೋಲು ಖಚಿತವಾಗಿರುವುದರಿಂದ ಹತಾಶ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೊನೆಯ ಕ್ಷಣದಲ್ಲಿ ಬಿಜೆಪಿ ಸರಕಾರದ ಸಾಧನೆಗಳು, ಬಂಟ್ವಾಳದ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ಮತ್ತೂಮ್ಮೆ ಮನದಟ್ಟಾಗುವಂತೆ ಹೇಳಿ ಪ್ರತಿಯೊಬ್ಬರೂ ಬಿಜೆಪಿಗೆ ಮತ ಹಾಕುವಂತೆ ನೋಡಿಕೊಳ್ಳಬೇಕಿದೆ ಎಂದು ರಾಜೇಶ್ ನಾೖಕ್ ಅವರು ವಿವರಿಸಿದರು.