ರಾಜಸ್ಥಾನ: ರಾಜಸ್ಥಾನದ ಸಲಂಬರ್ ಶಾಸಕ ಅಮೃತಲಾಲ್ ಮೀನಾ ಹೃದಯಾಘಾತದಿಂದ ಗುರುವಾರ ಮುಂಜಾನೆ (ಆಗಸ್ಟ್ 8) ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಮೀನಾ ಅವರ ಆರೋಗ್ಯ ಹಠಾತ್ ಹದಗೆಟ್ಟ ಹಿನ್ನೆಲೆಯಲ್ಲಿ ಬುಧವಾರ ತಡರಾತ್ರಿ ಉದಯಪುರದ ಮಹಾರಾಣಾ ಭೂಪಾಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.
ಮೀನಾ ಅವರು ಪತ್ನಿ ಶಾಂತಾ ದೇವಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
ಮೀನಾ ಅವರ ನಿಧನಕ್ಕೆ ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ಸಂತಾಪ ಸೂಚಿಸಿದ್ದಾರೆ ಅಲ್ಲದೆ X ನಲ್ಲಿ ಪೋಸ್ಟ್ ಮಾಡಿದ ಅವರು, “ಸಾಲುಂಬರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಅಮೃತ್ ಲಾಲ್ ಮೀನಾ ಅವರು ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿದು ನನಗೆ ಆಘಾತವಾಗಿದೆ. ಇದು ಬಿಜೆಪಿ ಕುಟುಂಬಕ್ಕೆ ತುಂಬಲಾರದ ನಷ್ಟ. ಈ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬ ಸದಸ್ಯರಿಗೆ ಸಿಗಲಿ ಎಂದು ಸರ್ವಶಕ್ತ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ!” ಎಂದು ಬರೆದುಕೊಂಡಿದ್ದಾರೆ.
ಅಮೃತಲಾಲ್ ಮೀನಾ ಅವರು ಎರಡು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದರು. ಅವರು 2004 ರಲ್ಲಿ ಸಾಲಂಬರ್‌ನ ಸರದಾ ಪಂಚಾಯತ್ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದರು ಮತ್ತು 2007 ರಿಂದ 2010 ರವರೆಗೆ ಉದಯಪುರ ಜಿಲ್ಲಾ ಪರಿಷತ್ತಿನ ಸದಸ್ಯರಾಗಿದ್ದರು. ಅವರು ಕಾಂಗ್ರೆಸ್‌ನ ಬಸಂತಿ ದೇವಿ ಮೀನಾ ಅವರನ್ನು ಸೋಲಿಸಿದ ನಂತರ 2013 ರಲ್ಲಿ ಮೊದಲು ಭಾರತೀಯ ಜನತಾ ಪಕ್ಷದ ಶಾಸಕರಾಗಿ ಆಯ್ಕೆಯಾದರು. 2018 ಮತ್ತು 2023 ರಲ್ಲಿ ಕಾಂಗ್ರೆಸ್ ನಾಯಕ ರಘುವೀರ್ ಮೀನಾ ವಿರುದ್ಧ ಸ್ಪರ್ಧಿಸಿ ಗೆದ್ದು ಈ ಸ್ಥಾನಕ್ಕೆ ಮರು ಆಯ್ಕೆಯಾಗಿದ್ದರು.
ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂಗಳ ವಿರುದ್ಧ ದಾಳಿ… ಸನಾತನ ಧರ್ಮ ಉಳಿಸಲು ಒಗ್ಗಟ್ಟಾಗಬೇಕಿದೆ: ಯೋಗಿ