Advertisement

ದೇಶದ “ಸ್ಮಾರ್ಟ್‌’ಮತದಾರರ ಸೆಳೆಯಲು ಬಿಜೆಪಿ ತಂತ್ರ

10:50 AM Jul 02, 2018 | |

ಹೊಸದಿಲ್ಲಿ /ಅಹಮದಾಬಾದ್‌: ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆ ನಡೆಸುತ್ತಿದ್ದು, 543 ಕ್ಷೇತ್ರಗಳಿಗೆ ಉಸ್ತುವಾರಿ ನೇಮಕ ಮಾಡುವ ಪ್ರಸ್ತಾವದ ಬಳಿಕ, ಸ್ಮಾರ್ಟ್‌ಫೋನ್‌ ಬಳಕೆ ಮಾಡುವವರ ಮೇಲೆ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಕಣ್ಣಿರಿಸಿದ್ದಾರೆ.

Advertisement

ಜತೆಗೆ ಪ್ರತಿ ಮತ ಕೇಂದ್ರದಲ್ಲೂ ಬೈಕ್‌ ಹೊಂದಿರುವ ಕನಿಷ್ಠ ಐವರನ್ನು ನೇಮಿಸಲು ಮುಂದಾಗಿದ್ದಾರೆ. ಜತೆಗೆ ಪ್ರಬಲವಾಗಿರುವ ಪಕ್ಷದಿಂದ ಕಾರ್ಯಕರ್ತರನ್ನು ಸೆಳೆಯಲೂ ಸೂಚನೆ ನೀಡಿದ್ದಾರೆ. ಬಿಜೆಪಿಯ “ಬೂತ್‌ ಪ್ಲಾನ್‌’ನ ಅಂಗವಾಗಿ ಈ ಸೂಚನೆಗಳನ್ನು ನೀಡಲಾಗಿದೆ. ಒಟ್ಟಿನಲ್ಲಿ ಹೊಸ ಬೆಂಬಲಿಗರನ್ನು ಹುಟ್ಟು ಹಾಕುವ ಮೂಲಕ 2019ರ ಚುನಾವಣೆ ಗೆಲ್ಲಲು ಬಿಜೆಪಿ 22 ಅಂಶಗಳ ಕಾರ್ಯಯೋಜನೆ ಸಿದ್ಧಗೊಳಿಸಿದೆ. ಪ್ರತಿ ಮತ ಕೇಂದ್ರದ ವ್ಯಾಪ್ತಿಯಲ್ಲಿ ಪಕ್ಷವನ್ನು ಬಲಗೊಳಿಸುವ ಯೋಜನೆ ಇದಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಇಬ್ಬರು ನಾಯಕರು “ದ ಹಿಂದುಸ್ತಾನ್‌ ಟೈಮ್ಸ್‌’ಗೆ ಮಾಹಿತಿ ನೀಡಿದ್ದಾರೆ.  “ಜೂ.10ರಿಂದ ಛತ್ತೀಸ್‌ಗಢದಿಂದ ಪ್ರವಾಸ ಆರಂಭಿಸಿರುವ ಅಮಿತ್‌ ಶಾ, ಮಾಸಾಂತ್ಯದ ಒಳಗೆ ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿ, ಚುನಾವಣಾ ಸಿದ್ಧತೆ ಪರಿಶೀಲಿಸಲಿದ್ದಾರೆ. ಬೂತ್‌ ನಿರ್ವಹಣೆ ಪಕ್ಷದ ನಾಯಕರ ಹೊಸ ಯೋಜನೆ’ ಎಂದಿದ್ದಾರೆ. 

ನಾಲ್ಕು ವಿಭಾಗ: ಬೂತ್‌ಗಳನ್ನು ಎ, ಬಿ, ಸಿ, ಮತ್ತು ಡಿ ಎಂದು 4 ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಎ ವರ್ಗದ ವ್ಯಾಪ್ತಿಯಲ್ಲಿ ಬಿಜೆಪಿ ಪರವೇ ಮತ ಚಲಾವಣೆಯಾಗುತ್ತದೆ. ಡಿ ವರ್ಗದಲ್ಲಿ ಬರುವ ಬೂತ್‌ಗಳಲ್ಲಿ ಪಕ್ಷಕ್ಕೆ ಬರುವ ಕನಿಷ್ಠ ಮತಗಳನ್ನು ಗುರುತಿಸಲಾಗಿದೆ. ಅವುಗಳ ನಿರ್ವಹಣೆಯನ್ನು ತಳಮಟ್ಟದ ಕಾರ್ಯಕರ್ತರಿಗೆ ಮತ್ತು ಸಿ ವ್ಯಾಪ್ತಿಯಲ್ಲಿ ಬೂತ್‌ಗಳನ್ನು ಪದಾಧಿಕಾರಿಗಳಿಗೆ ನೀಡಲಾಗುತ್ತದೆ. 

ಪ್ರತಿ ಮಂಡಲಕ್ಕೆ 5 ಬೂತ್‌: ಬಿಜೆಪಿ ಸಂಘಟನೆಯ ಕೊನೆಯ ವ್ಯಾಪ್ತಿಯಾಗಿರುವ ಪ್ರತಿ “ಮಂಡಲ’ಕ್ಕೆ 5 ಬೂತ್‌ಗಳ ಹೊಣೆ ನೀಡಲಾಗುತ್ತದೆ. ಡಿ ವಿಭಾಗದಲ್ಲಿ ಬರುವ ಬೂತ್‌ಗಳನ್ನು ಸಿ ವಿಭಾಗಕ್ಕೆ ಏರಿಸಲು ಕ್ರಮ ಕೈಗೊಳ್ಳುವಂತೆ ಪ್ರಚಾರ ನಡೆಸಬೇಕು. 

20 ಹೊಸ ಸದಸ್ಯರು: ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯದಿಂದ ಪ್ರತ್ಯೇಕವಾಗಿ ಕನಿಷ್ಠ 20 ಮಂದಿ ಸದಸ್ಯರನ್ನು ನೇಮಿಸುವ ಗುರಿಯನ್ನು ತಂಡಕ್ಕೆ ನೀಡಲಾಗಿದೆ. “ಪ್ರತಿ ತಿಂಗಳು ಕನಿಷ್ಠ 6 ಕಾರ್ಯಕ್ರಮ ನಡೆಸಬೇಕು. ಪ್ರಧಾನಿ ಮೋದಿಯವರ  ಮನ್‌ ಕಿ ಬಾತ್‌ ಕಾರ್ಯಕ್ರಮ ಕೇಳುವಂತೆ ವ್ಯವಸ್ಥೆ ಮಾಡಬೇಕು’ ಎಂದು ಯೋಜನೆಯಲ್ಲಿ ಪ್ರಸ್ತಾವಿಸಲಾಗಿದೆ. ಪ್ರತಿ ಬೂತ್‌ ಮಟ್ಟದಲ್ಲಿರುವ ಬಿಜೆಪಿ ಘಟಕದ ನಾಯಕರ ಮೊಬೈಲ್‌ ಸಂಖ್ಯೆಯನ್ನು ಆಯಾ ರಾಜ್ಯ ನಾಯಕರಿಗೆ ನೀಡಲು ಸೂಚಿಸಲಾಗಿದೆ.  ಜತೆಗೆ ಸ್ಮಾರ್ಟ್‌ಫೋನ್‌ ಹೊಂದಿರುವ ಮತದಾರರ ಪಟ್ಟಿ ಸಿದ್ಧಪಡಿಸುವ ಹೊಣೆಯನ್ನೂ ನೀಡಲಾಗಿದೆ. 

Advertisement

*ಲೋಕಸಭೆ ಚುನಾವಣೆಗೆ 22 ಅಂಶಗಳ ಕಾರ್ಯಯೋಜನೆ
*ಪ್ರತಿ ಬೂತ್‌ ಮಟ್ಟದಲ್ಲಿ ಬೈಕಲ್ಲಿ ತೆರಳುವ ಐವರು ಕಾರ್ಯಕರ್ತರ ನೇಮಕ
*ಪ್ರಬಲವಾಗಿರುವ ವಿಪಕ್ಷದಿಂದ ಕಾರ್ಯಕರ್ತರ ಸಳೆಯಲು ಯತ್ನ
*ನಾಲ್ಕು ಭಾಗಗಳಲ್ಲಿ ಬೂತ್‌ಗಳ ವಿಂಗಡಣೆ
*ಬಿಜೆಪಿಗೆ ಬೆಂಬಲ ಸಿಗದ ಬೂತ್‌ಗಳಲ್ಲಿ ಶಕ್ತಿ ವರ್ಧನೆಗೆ ಕ್ರಮ

Advertisement

Udayavani is now on Telegram. Click here to join our channel and stay updated with the latest news.

Next