Advertisement

ಸರಕಾರ, ಪಕ್ಷದ ವರ್ಚಸ್ಸು ವೃದ್ಧಿಗೆ ಬಿಜೆಪಿ ಕಾರ್ಯತಂತ್ರ

11:50 PM Nov 10, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸರಕಾರ ಮತ್ತು ಪಕ್ಷದ ಇಮೇಜ್‌ ವೃದ್ಧಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಆಡಳಿತಾರೂಢ ಬಿಜೆಪಿ ಮುಂದಾಗಿದೆ.

Advertisement

ಸರಕಾರ ಮತ್ತು ಪಕ್ಷ ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿ ಜನಪರ ಕಾರ್ಯಕ್ರಮಗಳ ಮೂಲಕ ಜನರ ಮನಗೆಲ್ಲುವ ಕಾರ್ಯ ತಂತ್ರದೊಂದಿಗೆ ಮುಂದುವರಿಯಲು ತೀರ್ಮಾನಿಸಿದೆ.

ರಾಜ್ಯ ಪದಾಧಿಕಾರಿಗಳ ಸಭೆ ಹಾಗೂ ಕೋರ್‌ ಕಮಿಟಿ ಸಭೆಯಲ್ಲಿ ಸರಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿ ವಿಷಯ ಪ್ರಮುಖವಾಗಿ ಚರ್ಚೆಯಾಗಿದ್ದು, ಮಂಡಲ ಹಾಗೂ ಬೂತ್‌ ಮಟ್ಟದಲ್ಲಿ ಸಂಘಟನಾತ್ಮಕವಾಗಿ ಬಲಪಡಿಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸಲು ರೂಪುರೇಷೆ ಹಾಕಿಕೊಂಡು ಮುಂದುವರಿಯಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

2023ರ ವಿಧಾನಸಭೆ ಚುನಾವಣೆ ಅದಕ್ಕೂ ಮುನ್ನ ವಿಧಾನಪರಿಷತ್‌ ಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ನಮ್ಮ ಗುರಿಯಾಗ ಬೇಕು. ಜನಪರ ಕಾರ್ಯಕ್ರಮಗಳ ಮೂಲಕ ಮಾತ್ರ ಪಕ್ಷ ಹಾಗೂ ಸರಕಾರದ ವರ್ಚಸ್ಸು ಹೆಚ್ಚಿಸಲು ಸಾಧ್ಯ ಎಂದು ಹಿರಿಯರು ಪ್ರತಿಪಾದಿಸಿದರು ಎಂದು ಹೇಳಲಾಗಿದೆ.

ಈ ಬಗ್ಗೆ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಪ್ರಮುಖವಾಗಿ ಸಲಹೆ ನೀಡಿದರು ಎಂದು ತಿಳಿದು ಬಂದಿದೆ.

Advertisement

ಇದನ್ನೂ ಓದಿ:ಮೋದಿಗೆ ಕೆಸಿಆರ್‌ ಸೆಡ್ಡು: ಬಿಜೆಪಿ ಆರೋಪ

ಆತ್ಮಾವಲೋಕನ
ಬೆಳಗಾವಿ ಲೋಕಸಭೆ ಉಪ ಚುನಾವಣೆ, ಮಸ್ಕಿ, ಬಸವಕಲ್ಯಾಣ ಹಾಗೂ ಇತ್ತೀಚೆಗೆ ನಡೆದ ಹಾನಗಲ್‌ ಮತ್ತು ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯ ಫ‌ಲಿತಾಂಶ ಪ್ರಸ್ತಾಪವಾಗಿ ಪಕ್ಷದ ಗೆಲುವಿಗೆ ಸಹಕಾರಿಯಾದ ಹಾಗೂ ಸೋಲಿಗೆ ಕಾರಣವಾದ ಅಂಶ, ಕಾಂಗ್ರೆಸ್‌ನ ಮತಗಳಿಕೆ ಎಲ್ಲದರ ಬಗ್ಗೆಯೂ ಚರ್ಚೆಯಾಗಿದ್ದು, ಸರಿ-ತಪ್ಪುಗಳ ವಿಮರ್ಶೆಯಾಗಿದೆ ಎನ್ನಲಾಗಿದೆ.

ಚುನಾವಣೆ ಮುಂದೂಡಬೇಡಿ
ಬಿಬಿಎಂಪಿ ಚುನಾವಣೆಯನ್ನು ಮತ್ತಷ್ಟು ಕಾಲ ಮುಂದೂಡಲು ಬಿಜೆಪಿಯಲ್ಲೇ ಪ್ರಯತ್ನ ನಡೆಯುತ್ತಿದೆ. ಬೆಂಗಳೂರು ನಗರದ ಸಚಿವರು ಹಾಗೂ ಶಾಸಕರಿಗೆ ಚುನಾವಣೆ ನಡೆಸಲು ಇಷ್ಟವಿಲ್ಲ ಎಂಬ ದೂರುಗಳ ಬಗ್ಗೆಯೂ ಬಿಬಿಎಂಪಿ ಸಿದ್ಧತೆ ಕುರಿತ ಸಭೆಯಲ್ಲಿ ಪ್ರಸ್ತಾಪಗೊಂಡು ಯಾವುದೇ ಕಾರಣಕ್ಕೂ ಅಂತಹ ಪ್ರಯತ್ನ ನಮ್ಮಿಂದ ನಡೆಯಬಾರದು. ಚುನಾವಣೆ ಎದುರಿಸಲು ಸಜ್ಜಾಗಬೇಕು. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಚುನಾವಣೆ ಮುಂದೂಡಲು ನಮ್ಮವರು ಬೆಂಬಲಿ ಸಬಾರದು ಎಂದು ತಾಕೀತು ಮಾಡ ಲಾಗಿದೆ ಎಂದು ತಿಳಿದು ಬಂದಿದೆ.

ಟಾರ್ಗೆಟ್‌ 15
ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕನಿಷ್ಠ 12 ರಿಂದ 15 ಸ್ಥಾನ ಗೆಲ್ಲುವ ಟಾರ್ಗೆಟ್‌ನೊಂದಿಗೆ ಕೆಲಸ ಮಾಡಲು ಸೂಚಿಸಲಾಗಿದೆ. ಬಿಜೆಪಿಗೆ ಕೆಲವು ಕಡೆ ಸಮರ್ಥ ಅಭ್ಯರ್ಥಿಗಳು ಇಲ್ಲದಿದ್ದರೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಸ್ಥಳೀಯವಾಗಿ ಪ್ರಭಾವ ಇರುವವರು ಬಂದರೆ ಸೇರಿಸಿಕೊಳ್ಳಲು ಹಸಿರು ನಿಶಾನೆ ತೋರಲಾಗಿದೆ. ಆದರೆ, ಪಕ್ಷಕ್ಕೆ ಬರಲು ಇಚ್ಛಿಸಿರುವವರ ಬಗ್ಗೆ ಜಿಲ್ಲಾ ಮಟ್ಟದಲ್ಲಿ ನಾಯಕರ ಅಭಿಪ್ರಾಯ ಪಡೆದೇ ಅಂತಿಮ ನಿರ್ಧಾರ ಕೈಗೊಳ್ಳಬೇಕೆಂದು ತಿಳಿಸಲಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next