ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಇಸ್ಲಾಮಿಕ್ ಧಾರ್ಮಿಕ ವಿದ್ವಾಂಸ ಡಾ.ಜಕೀರ್ ನಾಯ್ಕಗೆ ಕತಾರ್ ವಿಶೇಷ ಆತಿಥ್ಯ ನೀಡಿರುವುದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಪಕ್ಷದ ವಕ್ತಾರ ಸವಿಯೋ ರೋಡ್ರಿಗಸ್ ಮಾತನಾಡಿ ದೇಶದ ಫುಟ್ಬಾಲ್ ಆಟಗಾರರು ಪಂದ್ಯಾವಳಿ ಬಹಿಷ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಭಯೋತ್ಪಾದನೆ ಎಂಬ ಪಿಡುಗಿನಿಂದ ಜಗತ್ತು ನರಳುತ್ತಿರುವಾಗ ಜಕೀರ್ ನಾಯ್ಕಗೆ ಕತಾರ್ ಸರ್ಕಾರ ಆಹ್ವಾನ ನೀಡಿರುವುದು ಖಂಡನೀಯ.
ದ್ವೇಷವನ್ನು ಪಸರಿಸುವ ವ್ಯಕ್ತಿಗೆ ಆಹ್ವಾನ ನೀಡಿದ್ದು ಪ್ರಶ್ನಾರ್ಹ. ಭಾರತದ ಕಾನೂನಿನ ಅನ್ವಯ ಆತನ ವಿರುದ್ಧ ದ್ವೇಷ ಪೂರಿತ ಭಾಷಣಗಳಿಗೆ ವಿತ್ತೀಯ ನೆರವು ನೀಡಿದ ಆರೋಪಗಳಿವೆ. ಜತೆಗೆ ಉಗ್ರರ ಬಗ್ಗೆ ಸಹಾನುಭೂತಿ ಹೊಂದಿರುವಾತ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ, ಫಿಫಾ ಕಾರ್ಯಕ್ರಮದಲ್ಲಿ ಡಾ.ಜಕೀರ್ ನಾಯ್ಕ ಉಪಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರಕ್ಕೂ ಅಸಮಾಧಾನ ತಂದಿದೆ. ಉಧಾ^ಟನಾ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಕೂಡ ಇದ್ದರು. ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾಗಿದ್ದಾಗ ಕೂಡ ಕತಾರ್ ಸರ್ಕಾರ ನಾಯ್ಕನನ್ನು ಆಹ್ವಾನಿಸಿತ್ತು.
ಟ್ವಿಟರ್‌ನಲ್ಲಿ ಕೂಡ ಇದೊಂದು ಟ್ರೆಂಡಿಂಗ್ ಆಗಿದ್ದು, ಕೇಂದ್ರ ಸರ್ಕಾರದ ಮೌನದ ಬಗ್ಗೆ ಪ್ರಶ್ನಿಸಲಾಗಿದೆ. ನೂಪುರ್ ಶರ್ಮಾ ಹೇಳಿಕೆಯ ಬಗ್ಗೆ ತಕರಾರು ತೆಗಿದ್ದ ಕತಾರ್ ಜತೆಗೆ ಪ್ರಶ್ನಿಸಬೇಕು ಎಂದೂ ಒತ್ತಾಯಿಸಲಾಗಿದೆ.
ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ ಜಕೀರ್ ನಾಯ್ಕ ಉಪಸ್ಥಿತಿ ಬಗ್ಗೆ ಕತಾರ್ ಸರ್ಕಾರದ ಜತೆಗೆ ಪ್ರಸ್ತಾಪ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ “ಇದುವರೆಗೆ ಇಂಥ ದುರ್ಬಲ ಸರ್ಕಾರ ನೋಡಿಲ್ಲ’ ಎಂದು ಆಕ್ಷೇಪ ಮಾಡಿದೆ.