ಪಣಜಿ : ಇಂದು ಮಂಗಳವಾರ ನಸುಕಿನ 2 ಗಂಟೆಗೆ ಮುನ್ನವೇ ಬಿಜೆಪಿ ಶಾಸಕ ಪ್ರಮೋದ್ ಸಾವಂತ್ ಗೋವೆಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮನೋಹರ್ ಪಾರೀಕರ್ ಅವರ ಅಂತ್ಯಕ್ರಿಯೆ ಪೂರ್ಣ ಸರಕಾರಿ ಗೌರವಗಳೊಂದಿಗೆ ನಡೆದ ಬೆನ್ನಿಗೇ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕಾರವನ್ನು ಹಲವು ಬಾರಿ ಮುಂದೂಡಲಾಯಿತಾದರೂ ಅಂತಿಮವಾಗಿ ನಸುಕಿನ 1.50ರ ಸುಮಾರಿಗೆ ಪ್ರಮಾಣ ವಚನ ನಡೆಯಿತು.
ಗೋವೆಯ ರಾಜ್ಯಪಾಲೆ ಮೃದುಲಾ ಸಿನ್ಹಾ ಅವರು ರಾಜಭವನದಲ್ಲಿ ಪ್ರಮೋದ್ ಸಾವಂತ್ ಅವರಿಗೆ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಬೋಧಿಸಿದರು. ನಿನ್ನೆ ದಿನಪೂರ್ತಿ ತೆರೆಮರೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಮುಂದಿನ ಮುಖ್ಯಮಂತ್ರಿಯನ್ನು ಕಂಡುಕೊಳ್ಳುವ ಯತ್ನದಲ್ಲಿ ತೊಡಗಿಕೊಂಡಿದ್ದವು.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಪ್ರಮೋದ್ ಸಾವಂತ್ ಅವರು ರಾಜ್ಯ ವಿಧಾನಸಭೆಯಲ್ಲಿನ ತಮ್ಮ ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡಿದರು. 46ರ ಹರೆಯದ ಪ್ರಮೋದ್ ಸಾವಂತ್ ಅವರು ಉತ್ತರ ಗೋವೆಯ ಸಂಖಾಳಿ ಕ್ಷೇತ್ರದ ಶಾಸಕರಾಗಿದ್ದಾರೆ.
ಸಿಎಂ ಪ್ರಮಾಣ ವಚನ ಸ್ವೀಕಾರದ ಬೆನ್ನಿಗೇ ರಾಜ್ಯಪಾಲೆ ಸಿನ್ಹಾ ಅವರು ಬಿಜೆಪಿಯ ಮಿತ್ರ ಪಕ್ಷ ಎಂಜಿಪಿ ಮತ್ತು ಜಿಎಫ್ಪಿ ಸೇರಿದಂತೆ ಒಟ್ಟು 11 ಮಂದಿ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.