Advertisement

ಬಿಜೆಪಿ ದೇಶಪ್ರೇಮದ ಪಾಠ ಹಾಸ್ಯಾಸ್ಪದ

03:09 PM Aug 11, 2022 | Team Udayavani |

ಗಜೇಂದ್ರಗಡ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ದೇಶಾದ್ಯಂತ ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿರುವ ಸ್ವಾಭಿಮಾನಿ ಪಾದಯಾತ್ರೆ ಬುಧವಾರ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು.

Advertisement

ಈ ವೇಳೆ ಮಾಜಿ ಶಾಸಕ ಜಿ. ಎಸ್‌. ಪಾಟೀಲ ಮಾತನಾಡಿ, ಬ್ರಿಟಿಷರ ದಬ್ಟಾಳಿಕೆ, ದೌರ್ಜನ್ಯದಿಂದ ದೇಶದ ಜನತೆ ಬೇಸತ್ತಿದ್ದರು. ನಿತ್ಯ ಕಿರುಕುಳಗಳನ್ನು ಸಹಿಸಿಕೊಂಡು ಬದುಕು ಸಾಗಿಸುತ್ತಿದ್ದ ದೇಶವಾಸಿಗಳಿಗೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಕಾಂಗ್ರೆಸ್‌ ಪಕ್ಷ ಆಂಗ್ಲರ ವಿರುದ್ಧ ಹೋರಾಡಿದೆ. ಬ್ರಿಟಿಷರ ಗುಂಡೇಟಿಗೆ ಹಲವಾರು ಹೋರಾಟಗಾರರು ಅಸುನೀಗಿದ್ದಾರೆ. ಅಂತಹ ಇತಿಹಾಸವುಳ್ಳ ಕಾಂಗ್ರೆಸ್‌ ಪಕ್ಷಕ್ಕೆ ದೇಶಪ್ರೇಮದ ಪಾಠ ಹೇಳಿಕೊಡಲು ಹೊರಟಿರುವ ಬಿಜೆಪಿ ನಡೆ ಹಸ್ಯಾಸ್ಪದವಾಗಿದೆ ಎಂದರು.

ರಾಷ್ಟ್ರಪ್ರೇಮ, ರಾಷ್ಟ್ರೀಯತೆ, ಭಾತೃತ್ವತೆ ಏನೆಂಬುದು ಬಿಜೆಪಿಯವರಿಗೇನು ಗೊತ್ತು. ದೇಶದ ಸಂವಿಧಾನದ ಮೇಲೆ ನಂಬಿಕೆ ಇಲ್ಲದೇ ಆಡಳಿತ ನಡೆಸುತ್ತಿರುವವರು ರಾಷ್ಟ್ರಭಕ್ತಿ ಮೆರೆಯುವರೇ? ಸ್ವಾರ್ಥ ರಾಜಕಾರಣಕ್ಕಾಗಿ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ದೇಶದ ಜನರ ದಿಕ್ಕು ತಪ್ಪಿಸುವ ಪೊಳ್ಳು ರಾಷ್ಟ್ರಪ್ರೇಮ ಅವರದ್ದಾಗಿದೆ ಎಂದು ಕಿಡಿಕಾರಿದರು.

ಗಜೇಂದ್ರಗಡ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ ಘೋರ್ಪಡೆ ಮಾತನಾಡಿ, ಸ್ವತಂತ್ರ ಭಾರತಕ್ಕೆ ತನ್ನದೇ ಆದ ಇತಿಹಾಸವಿದೆ. ವಿಶ್ವದಲ್ಲಿಯೇ ಭಾರತವನ್ನು ಸಾಂಸ್ಕೃತಿಕ ರಾಯಭಾರಿಯನ್ನಾಗಿ ನೋಡಲಾಗುತ್ತಿದೆ. ಇಂತಹ ಭಾರತದ ಪರಂಪರೆಯನ್ನು ಕದಡಿಸುವ ನಿಟ್ಟಿನಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವುದು ಖಂಡನೀಯ. ದೇಶದ ಸರ್ವಧರ್ಮೀಯರೂ ಅನ್ಯೋನ್ಯದಿಂದ ಬದುಕುವ ಸಂದರ್ಭದಲ್ಲಿ ಪದೇ, ಪದೆ ಜಾತೀಯತೆಯ ಕಂದಕ ಸೃಷ್ಟಿ ಮಾಡುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಭಾರತ ಸರ್ಕಾರ ಭಾವೈಕ್ಯತೆಯ ವಿರುದ್ಧವಾಗಿ ನಡೆದುಕೊಳ್ಳಿತ್ತಿದೆ ಎಂದು ವಿಶ್ವ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಚೆಗಳಾಗುತ್ತಿವೆ. ಇದಕ್ಕೆ ಆಸ್ಪದ ನೀಡಬಾರದು. ನಾವೆಲ್ಲರೂ ಒಂದೇ ಎಂಬ ಸದಾಶಯ ವ್ಯಕ್ತಪಡಿಸಲು ಬಿಜೆಪಿ ಸರ್ಕಾರ ತೊಲಗಬೇಕು. ಅಂದಾಗ ಮಾತ್ರ ಸಹೋದರತ್ವ ಉಳಿಯಲು ಸಾಧ್ಯ ಎಂದರು.

ಇದಕ್ಕೂ ಮುನ್ನ ಸ್ಥಳೀಯ ಮೈಸೂರ ಮಠದಿಂದ ಆರಂಭವಾದ ಪಾದಯಾತ್ರೆ ಮೆರವಣಿಗೆ ದುರ್ಗಾ ವೃತ್ತ, ಜೋಡು ರಸ್ತೆ, ಶ್ರೀ ಕಾಲಕಾಲೇಶ್ವರ ವೃತ್ತ, ರೋಣ ರಸ್ತೆ ಮಾರ್ಗವಾಗಿ ಪುರ್ತಗೇರಿ ಗ್ರಾಮಕ್ಕೆ ತೆರಳಿತು. ಪುರಸಭೆ ವಿಪಕ್ಷ ನಾಯಕ ಮುರ್ತುಜಾ ಡಾಲಾಯತ್‌, ವೀರಣ್ಣ ಶೆಟ್ಟರ, ಮಿಥುನ ಪಾಟೀಲ, ಮಂಜುಳಾ ರೇವಡಿ, ರಾಜು ಸಾಂಗ್ಲಿಕಾರ, ವೆಂಕಟೇಶ ಮುದಗಲ್ಲ, ಶ್ರೀಧರ ಬಿದರಳ್ಳಿ, ಸುಮಂಗಲಾ ಇಟಗಿ, ಶಾರದಾ ರಾಠೊಡ, ಬಸವರಾಜ ಚನ್ನಿ, ಅಪ್ಪು ಮತ್ತಿಕಟ್ಟಿ, ಪ್ರಶಾಂತ್‌ ರಾಠೊಡ, ಅಬ್ದುಲ್‌ ರೆಹಮಾನ ನದೀಮುಲ್ಲಾ, ಬಿ.ಎಸ್‌. ಶೀಲವಂತರ, ಮುತ್ತಣ್ಣ ಮ್ಯಾಗೇರಿ, ಹಸನ ತಟಗಾರ, ಶರಣು ಪೂಜಾರ, ಮಾಸುಮಲಿ ಮದಗಾರ, ಯಲ್ಲಪ್ಪ ಬಂಕದ, ಅರ್ಜುನ್‌ ರಾಠೊಡ, ಅಶ್ರಫಲಿ ಗೊಡೇಕಾರ ಸೇರಿದಂತೆ ಹಲವಾರು ಕಾಂಗ್ರೆಸ್‌ ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next