Advertisement

ಎಸ್‌ಐಟಿಗೆ ಬಿಜೆಪಿ ಆಕ್ಷೇಪ: ಪಟ್ಟು ಸಡಿಲಿಸದ ಸ್ಪೀಕರ್‌

12:30 AM Feb 12, 2019 | Team Udayavani |

ವಿಧಾನಸಭೆ: ಆಡಿಯೋ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ನೀಡಬಾರದು. ಬದಲಿಗೆ ಸದನ ಸಮಿತಿ ಇಲ್ಲವೇ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಸೋಮವಾರ ಬೆಳಗಿನ ಕಲಾಪದಲ್ಲಿ ಒತ್ತಾಯಿಸಿದ್ದ ಬಿಜೆಪಿಯು ಮಧ್ಯಾಹ್ನ ನಂತರದ ಕಲಾಪದಲ್ಲೂ ಇದೇ ಒತ್ತಾಯ ಮುಂದುವರಿಸಿತು.

Advertisement

ಪರಿಣಾಮ ಆಡಳಿತ ಪಕ್ಷಗಳು ಹಾಗೂ ಪ್ರತಿಪಕ್ಷದ ಸದಸ್ಯರು ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದರಿಂದ ಸಭಾಧ್ಯಕ್ಷರು ಒಂದು ಬಾರಿ ಸದನ ಮುಂದೂಡಿದರೂ ಗದ್ದಲ ಕಡಿಮೆಯಾಗಲಿಲ್ಲ. ಬೆಳಗಿನ ಕಲಾಪದ ವೇಳೆ ತಾವು ಕೈಗೊಂಡ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳುವ ಮೂಲಕ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಸದನವನ್ನು ಮಂಗಳವಾರಕ್ಕೆ ಮುಂದೂಡಿದರು.

ಮಧ್ಯಾಹ್ನ ಭೋಜನ ವಿರಾಮದ ನಂತರ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿಯ ಜೆ.ಸಿ. ಮಾಧುಸ್ವಾಮಿ, ಪ್ರಕರಣವನ್ನು ಎಸ್‌ಐಟಿಗೆ ವಹಿಸುವುದು ಸರಿಯಲ್ಲ. ಆಳುವವರ ಕೈಕೆಳಗೆ ನಮ್ಮನ್ನು ತರಬಾರದು. ಆರೋಪ ಮಾಡಿದವರ ಕೆಳಗೆ ನಮ್ಮ ತಲೆಯನ್ನು ತರುವುದು ಸರಿಯೇ ಎಂದು ಪ್ರಶ್ನಿಸಿದರು.

ಇದಕ್ಕೆ ಆಕ್ಷೇಪಿಸಿದ ಸಚಿವ ಕೃಷ್ಣ ಬೈರೇಗೌಡ, ಸದಸ್ಯರು ಸೂಚನೆ ನೀಡಿ ಆರೋಪ ಮಾಡಲಿ. ಅದನ್ನು ಬಿಟ್ಟು ಅವರು ಏನೇನೋ ಮಾತನಾಡಲು ಸಭಾಧ್ಯಕ್ಷರು ಅವಕಾಶ ನೀಡಬಾರದು ಎಂದು ಮನವಿ ಮಾಡಿದರು. ಬಿಜೆಪಿಯ ಆರಗ ಜ್ಞಾನೇಂದ್ರ, ಸಭಾಧ್ಯಕ್ಷರ ಹೆಸರನ್ನು ರಾಜಕೀಯ ಅಸ್ತ್ರವನ್ನಾಗಿ ಆಡಳಿತ ಪಕ್ಷಗಳು ಬಳಸಿಕೊಳ್ಳುತ್ತಿವೆ ಎಂದು ದೂರಿದರು. ಆಗ ಸಭಾಧ್ಯಕ್ಷ ರಮೇಶ್‌ ಕುಮಾರ್‌, ನನ್ನನ್ನು ಯಾರೂ ಅಸ್ತ್ರವಾಗಿಯೋ ಇಲ್ಲವೇ ಆಟದ ವಸ್ತುವಿನಂತೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರದ ಮುಖ್ಯಸ್ಥರ ಕೆಳಹಂತದಲ್ಲಿರುವ ಅಧಿಕಾರಿಗಳು ಅವರ ಅಧೀನದಲ್ಲೇ ಇರುತ್ತಾರೆ ಎಂದು ಭಾವಿಸುವುದು ಸರಿಯಲ್ಲ ಎಂದು ಹೇಳಿದರು.

ಇದಕ್ಕೆ ಸಮಾಧಾನಗೊಳ್ಳದ ಮಾಜಿ ಸಿಎಂ ಜಗದೀಶ ಶೆಟ್ಟರ್‌, ಸರ್ಕಾರದ ಮೇಲೆ ವಿಶ್ವಾಸವಿಲ್ಲ. ಆಡಿಯೋ ವಿಚಾರವನ್ನು ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಯವರೇ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ ಎಂದು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿ ರಮೇಶ್‌ ಕುಮಾರ್‌, ನ್ಯಾಯಾಂಗ ತನಿಖೆಗೆ ವಹಿಸಿದರೆ ತುಂಬಾ ಸಮಯ ಹಿಡಿಯುತ್ತದೆ. ಅಲ್ಲಿಯವರೆಗೆ ನನ್ನ ಸಂಕಷ್ಟವನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದು ಹೇಳಿದರು. ಇದಕ್ಕೂ ಸುಮ್ಮನಾಗದ ಶೆಟ್ಟರ್‌, ನಾನೇ ಶರಣಗೌಡ ಅವರನ್ನು ಕಳುಹಿಸಿದೆ. ನಾನೇ ಅವರಿಗೆ ರೆಕಾರ್ಡ್‌ ಮಾಡುವಂತೆ ಹೇಳಿದ್ದೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಹಾಗಾಗಿ ಅವರೇ ನಂ. ಒನ್‌ ಆರೋಪಿಯಾಗುತ್ತಾರೆ. ಹೀಗಿರುವಾಗ ಸರ್ಕಾರಕ್ಕೆ ತನಿಖೆ ನಡೆಸುವ ಅವಕಾಶ ನೀಡಿದರೆ ಅಧಿಕಾರ ದುರುಪಯೋಗವಾಗಲಿದೆ. ಒಂದೊಮ್ಮೆ ಹಾಗೆ ನೀಡುವುದೇ ಆದರೆ ಎಲ್ಲ ಟೇಪ್‌ ಹಗರಣಗಳ ತನಿಖೆಯನ್ನೂ ನಡೆಸಲಿ ಎಂದು ಆಗ್ರಹಿಸಿದರು.

Advertisement

ಇದಕ್ಕೆ ದನಿಗೂಡಿಸಿದ ಬಸವರಾಜ ಬೊಮ್ಮಾಯಿ, ಸಭಾಧ್ಯಕ್ಷರ ಹೆಸರನ್ನು ಮಾಧ್ಯಮಗಳ ಮುಂದೆ ಹೇಳಿರುವ ಉದ್ದೇಶವೇನು ಎಂದು ಪ್ರಶ್ನಿಸಿದರು.ಈ ಬಗ್ಗೆ ಕೆಲ ಸಮಯ ಚರ್ಚೆ ನಡೆಯಿತು. ಬಿಜೆಪಿ ಸದಸ್ಯರು ಎಸ್‌ಐಟಿ ತನಿಖೆಗೆ ವಹಿಸಬಾರದು ಎಂದು ಒತ್ತಾಯಿಸಿದರೆ ಕಾಂಗ್ರೆಸ್‌, ಜೆಡಿಎಸ್‌ ಶಾಸಕರು ಪ್ರತಿರೋಧ ವ್ಯಕ್ತಪಡಿಸಿದರು. ಸದನವನ್ನು ಅರ್ಧ ಗಂಟೆ ಕಾಲ ಮುಂದೂಡಲಾಯಿತು.

ಸಂಜೆ 4.40ಕ್ಕೆ ಸದನ ಆರಂಭವಾಗುತ್ತಿದ್ದಂತೆ ಜೆಡಿಎಸ್‌ನ ಎ.ಟಿ.ರಾಮಸ್ವಾಮಿಯವರು ಪ್ರಶ್ನೋತ್ತರ ಕಲಾಪ ಆರಂಭಿಸಬೇಕು ಎಂದು ಮನವಿ ಮಾಡಿದರು. ಆಗ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಎಸ್‌ಐಟಿ ತನಿಖೆ ಬದಲಿಗೆ ಸದನ ಸಮಿತಿ ಇಲ್ಲವೇ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ಸಚಿವ ಡಿ.ಕೆ.ಶಿವಕುಮಾರ್‌, ಬೆಳಗ್ಗಿನ ಕಲಾಪದಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆಯಾಗಿದ್ದು, ಸಭಾಧ್ಯಕ್ಷರು ತಮ್ಮ ತೀರ್ಮಾನ ಪ್ರಕಟಿಸಿದ್ದಾರೆ. ಆ ಬಗ್ಗೆ ಮತ್ತೆ ಚರ್ಚೆ ಏಕೆ? ನಿಮಿಷ, ಗಂಟೆಗೊಮ್ಮೆ ನಿರ್ಧಾರ ಬದಲಿಸಲು ಸಾಧ್ಯವಿಲ್ಲ. ನೀವೇ (ಬಿಜೆಪಿ) ತನಿಖೆ ನಡೆಸುತ್ತೀರಾ ಎಂದು ಪ್ರಶ್ನಿಸಿದರು.

ಶಿವಕುಮಾರ್‌ ಹೇಳಿರುವುದು ಸರಿಯಾಗಿದೆ. ಟೆಲಿಫೋನ್‌ ಕದ್ದಾಲಿಕೆ ಹಗರಣವನ್ನು ಅಂದಿನ ಮುಖ್ಯಮಂತ್ರಿಗಳು ನ್ಯಾಯಾಂಗ ತನಿಖೆ ವಹಿಸಿದ್ದರು. ಅದೇ ರೀತಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂಬುದು ನಮ್ಮ ಆಗ್ರಹ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ನಾನು ಅಂಪೈರ್‌ ಮಾತ್ರ
ರಮೇಶ್‌ ಕುಮಾರ್‌ ಮಾತನಾಡಿ, ನೀವು (ಬಿಜೆಪಿ) ಸರ್ಕಾರವನ್ನು ಅಸ್ಥಿರಗೊಳಿಸಲಾದರೂ ಪ್ರಯತ್ನಿಸಿ. ಅವರು ಸರ್ಕಾರವನ್ನು ಸುಸ್ಥಿರವಾಗಿಟ್ಟುಕೊಳ್ಳಲು ಪ್ರಯತ್ನಿಸಲಿ. ನಾನು ಅಂಪೈರ್‌ ಮಾತ್ರ. ನನ್ನ ಹೆಸರು ಪ್ರಸ್ತಾಪವಾಗಿದ್ದರಿಂದ ಸದನದ ಗಮನಕ್ಕೆ ತಂದಿದ್ದೇನೆ. ನ್ಯಾಯಾಂಗ ತನಿಖೆಗೆ ವಹಿಸಿದರೆ ವಿಳಂಬವಾಗಲಿದೆ. ನಾನು ನಿರಾಳನಾಗಬೇಕಿದ್ದು, 15 ದಿನದಲ್ಲಿ ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಎಂದರು. ಆಗ ಕಾಂಗ್ರೆಸ್‌ ಶಾಸಕರು ಮೇಜು ಕುಟ್ಟಿ , ಚಪ್ಪಾಳೆ ತಟ್ಟಿದ್ದರಿಂದ ಬೇಸರಗೊಂಡ ರಮೇಶ್‌ ಕುಮಾರ್‌, ‘ಯಾಕೆ ಚಪ್ಪಾಳೆ ತಟ್ಟುತ್ತೀರಿ. ಮುಖ್ಯಮಂತ್ರಿಗಳಾದ ಮಾತ್ರಕ್ಕೆ ಸರ್ಕಾರಿ ಸೇವೆಯಲ್ಲಿರುವ ಎಲ್ಲರೂ ಅವರ ಅಧೀನದಲ್ಲೇ ಇರುತ್ತಾರೆ ಎಂದು ಭಾವಿಸುವುದು ಸರಿಯಲ್ಲ. ನಿಯಮಬಾಹಿರವಾಗಿ ನೀಡುವ ಆದೇಶವನ್ನು ನಿರಾಕರಿಸುವ ಅಧಿಕಾರಿಗಳು ಇದ್ದಾರೆ. ಮುಖ್ಯಮಂತ್ರಿಗಳು ಆ ಮಟ್ಟಕ್ಕೆ ಹೋಗಿ ನಿಯಮಬಾಹಿರ ಆದೇಶ ನೀಡುತ್ತಾರೆ ಎಂದರ್ಥವಲ್ಲ. ಹಾಗಾಗಿ ಎಸ್‌ಐಟಿ ಮಾಡಿ ಎಂದು ಸಲಹೆ ನೀಡಿದ್ದು, ಆ ತೀರ್ಮಾನವನ್ನು ಪುನರ್‌ಪರಿಶೀಲಿಸಲು ಸಿದ್ಧನಿಲ್ಲ’ ಎಂದು ಸ್ಪಷ್ಟಪಡಿಸಿದರು. ಆಗ ಕೆ.ಎಸ್‌.ಈಶ್ವರಪ್ಪ, ಎಸ್‌ಐಟಿ ತನಿಖೆ ಬಗ್ಗೆ ನಮಗೆ ನಂಬಿಕೆ ಇಲ್ಲ. ಕಳ್ಳರ ಕೈಗೆ ಬೀಗ ಕೊಟ್ಟರೆ ಏನು ಹೇಳುವುದು ಎಂದರು. ಇದಕ್ಕೆ ಆಡಳಿತ ಪಕ್ಷಗಳ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಸಭಾಧ್ಯಕ್ಷರು, ಕಳ್ಳ ಎಂಬ ಪದವನ್ನು ಕಡತದಿಂದ ತೆಗೆಸಿ ಸದನವನ್ನು ಮುಂದೂಡಿದರು.

Advertisement

Udayavani is now on Telegram. Click here to join our channel and stay updated with the latest news.

Next