Advertisement
ಸದ್ಯ ಯಡಿಯೂರಪ್ಪ ಸೇರಿ ಒಂಬತ್ತು ಮಂದಿ ಲಿಂಗಾಯಿತರು ಸಂಪುಟದಲ್ಲಿದ್ದಾರೆ. ಗುರುವಾರ ನಾಲ್ಕು ಮಂದಿ ಒಕ್ಕಲಿಗ ಶಾಸಕರು ಸಚಿವರಾಗಿದ್ದು, ಸಂಪುಟದಲ್ಲಿ ಸಮುದಾಯದ ಪ್ರಾತಿನಿಧ್ಯ ಏಳಕ್ಕೆ ಏರಿದೆ. ಆ ಮೂಲಕ ಲಿಂಗಾಯಿತ ಸಮು ದಾಯದ ಬಳಿಕ ಸಂಪುಟದಲ್ಲಿ ಎರಡನೇ ಅತಿ ಹೆಚ್ಚು ಪ್ರಾತಿನಿಧ್ಯವನ್ನು ಒಕ್ಕಲಿಗ ಸಮುದಾಯ ಪಡೆದಂತಾಗಿದೆ.
Related Articles
Advertisement
ಜತೆಗೆ, ಎಂ.ಪಿ.ರೇಣುಕಾಚಾರ್ಯ, ಶಂಕರಗೌಡ ಪಾಟೀಲ್ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯನ್ನಾಗಿ ಮಾಡಲಾಗಿತ್ತು. ಎರಡನೇ ಸಂಪುಟ ವಿಸ್ತರಣೆಯಲ್ಲೂ ಲಿಂಗಾಯಿತ ಸಮುದಾಯದ ಬಿ.ಸಿ.ಪಾಟೀಲ್ ಸಚಿವರಾಗಿದ್ದು, ಲಿಂಗಾಯಿತರ ಪ್ರಾತಿನಿಧ್ಯ 9ಕ್ಕೆ ಏರಿಕೆ ಯಾಗಿದೆ. ಉಮೇಶ್ ಕತ್ತಿ ಅವರು ಸಚಿವರಾಗುವುದು ನೂರಕ್ಕೆ ನೂರು ಖಚಿತ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಹೀಗೆ, ಪಕ್ಷವನ್ನು ಬೆಂಬಲಿಸುತ್ತಿರುವ ಲಿಂಗಾಯಿತ ಸಮುದಾಯದ ವಿಶ್ವಾಸವನ್ನು ಉಳಿಸಿ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಗಮನ ಹರಿಸಿದೆ.
ಒಕ್ಕಲಿಗ ಸಮುದಾಯಕ್ಕೂ ಆದ್ಯತೆ: ಮುಂಬೈ, ಕಲ್ಯಾಣ, ಮಧ್ಯ, ಕರಾವಳಿ ಕರ್ನಾಟಕ ಭಾಗದಲ್ಲಿ ಉತ್ತಮ ನೆಲೆ ರೂಪಿಸಿಕೊಂಡಿರುವ ಬಿಜೆಪಿ, ನಿರೀಕ್ಷಿತ ಮಟ್ಟದಲ್ಲಿ ಸಂಘಟನೆಯಿಲ್ಲದ ದಕ್ಷಿಣ ಕರ್ನಾಟಕ ಭಾಗದಲ್ಲೂ ಪಕ್ಷವನ್ನು ಗಟ್ಟಿಯಾಗಿ ಬೆಳೆಸುವತ್ತ ಹೆಜ್ಜೆ ಇರಿಸಿದೆ. ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಪ್ರಭಾವಿ ಎನಿಸಿರುವ ಒಕ್ಕಲಿಗ, ರೆಡ್ಡಿ ಸಮುದಾಯವನ್ನು ಸೆಳೆಯುವ ಮೂಲಕ ಪಕ್ಷ ಬಲವರ್ಧನೆಗೆ ಮುಂದಾಗಿದೆ.
ಒಕ್ಕಲಿಗರ ಪ್ರಾತಿನಿಧ್ಯ 7ಕ್ಕೆ ಏರಿಕೆ: ಮೊದಲ ಸಂಪುಟ ವಿಸ್ತರಣೆಯಲ್ಲಿ ಒಕ್ಕಲಿಗ ಸಮುದಾಯದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರನ್ನು ಉಪಮುಖ್ಯಮಂತ್ರಿ ಜತೆಗೆ ಆರ್.ಅಶೋಕ್, ಸಿ.ಟಿ.ರವಿ ಅವರನ್ನು ಸಚಿವರನ್ನಾಗಿ ಮಾಡಲಾಗಿತ್ತು. ಎರಡನೇ ಸಂಪುಟ ವಿಸ್ತರಣೆಯಲ್ಲಿ ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ನಾರಾಯಣಗೌಡ, ಡಾ.ಕೆ.ಸುಧಾಕರ್ ಅವರನ್ನು ಮಂತ್ರಿ ಮಾಡುವ ಮೂಲಕ ಸಂಪುಟದಲ್ಲಿ ಒಕ್ಕಲಿಗರ ಪ್ರಾತಿನಿಧ್ಯ ಏಳಕ್ಕೆ ಏರಿಕೆಯಾಗಿದೆ. ಈ ನಾಲ್ಕೂ ಸಚಿವರು ಹಳೇ ಮೈಸೂರಿನವರಾಗಿದ್ದು, ಮಂಡ್ಯ, ಬೆಂಗಳೂರು, ಚಿಕ್ಕಬಳ್ಳಾಪುರ ಪ್ರತಿನಿಧಿಸುತ್ತಿದ್ದಾರೆ.
ಜೆಡಿಎಸ್ ಮತಬುಟ್ಟಿಗೆ ಕಮಲದ ಕೈ: ಹಳೇ ಮೈಸೂರು ಭಾಗದ ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಹಾಸನ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಇಂದಿಗೂ ತಮ್ಮ ಪ್ರಾಬಲ್ಯ ಉಳಿಸಿಕೊಂಡಿವೆ. ಈ ಭಾಗದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಒಕ್ಕಲಿಗ ಸಮುದಾಯ ಜೆಡಿಎಸ್‌ಗೆ ಉತ್ತಮ ಬೆಂಬಲ ನೀಡುತ್ತಾ ಬಂದಿದ್ದು, ಪಕ್ಷಕ್ಕೆ ಗಟ್ಟಿ ನೆಲೆ ತಂದು ಕೊಟ್ಟಿದೆ.
ಇದೀಗ ತೆನೆ ಹೊತ್ತ ಮಹಿಳೆಯ ಪಕ್ಷದ ಮತಬುಟ್ಟಿಗೆ ಕಮಲ ಕೈ ಹಾಕಿದಂತಿದೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಜಯ ಗಳಿಸಿದ್ದಾರೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕೆ.ಆರ್.ಪೇಟೆಯಲ್ಲಿ ನಾರಾಯಣಗೌಡ ಜಯ ಗಳಿಸಿದ್ದಾರೆ. ಈವರೆಗೆ ಖಾತೆ ತೆರೆಯದ ರಾಮನಗರ ಜಿಲ್ಲೆಯಲ್ಲಿ ಕಮಲ ಅರಳಿಸಲು ಬಿಜೆಪಿ ನಾಯಕರು ದೃಷ್ಟಿ ನೆಟ್ಟಿದ್ದಾರೆ.
ಆ ಕಾರಣಕ್ಕೆ ಒಕ್ಕಲಿಗ ಸಮುದಾಯದ ಸಿ.ಪಿ. ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡುವ ಮಾತು ಕೇಳಿ ಬಂದಿತ್ತು. ಮುಂದಿನ ಬಾರಿ ಅವರು ಸಚಿವರಾದರೂ ಅಚ್ಚರಿ ಇಲ್ಲ. ರಾಜ್ಯದಲ್ಲಿ 2008 ಹಾಗೂ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದಿಂದ ಕ್ರಮವಾಗಿ 108 ಹಾಗೂ 104 ಸ್ಥಾನ ಗೆದ್ದಿತ್ತು. ವಿಧಾನಸಭೆಯಲ್ಲಿ ಸರಳ ಬಹುಮತ ಗಳಿಸಲು ಹಳೇ ಮೈಸೂರು ಭಾಗದಲ್ಲಿ ಇನ್ನಷ್ಟು ಸ್ಥಾನ ಗೆಲ್ಲುವುದು ಅನಿವಾರ್ಯ ಎಂಬುದನ್ನು ಮನಗಂಡ ನಾಯಕರು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಬಿಜೆಪಿ ಸರ್ಕಾರದ ಸಂಪುಟದಲ್ಲಿ ದಕ್ಷಿಣ ಕರ್ನಾಟಕಕ್ಕೂ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿದೆ. ಇದರಿಂದ ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಇನ್ನಷ್ಟು ವ್ಯಾಪಕ ಹಾಗೂ ಸಮರ್ಥವಾಗಿ ಬೆಳೆಸಲು ಅನುಕೂಲವಾಗಲಿದೆ. ಸರ್ವಸ್ಪರ್ಶಿ, ಸರ್ವವ್ಯಾಪಿಯಾಗಿ ಪಕ್ಷವನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಯಲಿದೆ.-ಮಹೇಶ್ ಟೆಂಗಿನಕಾಯಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ * ಎಂ. ಕೀರ್ತಿಪ್ರಸಾದ್