ಚಿಕ್ಕಬಳ್ಳಾಪುರ: ಇತ್ತೀಚಿಗೆ ನಡೆದ ಹರ್ಯಾಣ, ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ವಿರುದ್ದ ಜನಾದೇಶ ಬಂದಿದೆಯೆಂದು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಮಂಗಳವಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮೋದಿ ಸರ್ಕಾರ ಹೆಚ್ಚು ದಿನ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ. ಹರ್ಯಾಣ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಆದರೆ ಮತದಾರರು ಬಿಜೆಪಿ ವಿರುದ್ದವಾಗಿದ್ದಾರೆಂಬದು ಈ ರಾಜ್ಯಗಳ ಚುನಾವಣೆ ಫಲಿತಾಂಶ ತೋರಿಸಿದೆ ಎಂದರು.
ಯುಪಿಎ ಸರ್ಕಾರದಲ್ಲಿ ರಾಷ್ಟ್ರದ ರೈತರು ನೆಮ್ಮದಿಯಾಗಿ ಇದ್ದರು. ಮನಮೋಹನ್ ಸಿಂಗ್ ಸರ್ಕಾರದಲ್ಲಿ ರೈತರಿಗೆ 72 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಯಿತು. ಆದರೆ ಬಿಜೆಪಿ ಸರ್ಕಾರ ರೈತರಿಗೆ ಬಿಡಿಗಾಸು ಕೊಡಲಿಲ್ಲ. ಮೋದಿಗೆ ಕೆಲವೇ ಕೆಲ ಬಂಡವಾಳಶಾಹಿಗಳ ಮೇಲೆ ಇರುವ ಪ್ರೀತಿ ದೇಶದ ರೈತರ ಹಾಗೂ ಜನ ಸಾಮಾನ್ಯರ ಮೇಲೆ ಇಲ್ಲ. 2.50 ಲಕ್ಷ ಕೋಟಿ ಸಾಲವನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಸಾಲ ಮನ್ನಾ ಮಾಡಿದ್ದಾರೆ ಎಂದರು. ಮುಂಬರುವ ದೆಹಲಿ ಹಾಗೂ ರ್ಜಾಖಾಂಡ್ ರಾಜ್ಯದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು. ಮೋದಿ ಸರ್ಕಾರದಲ್ಲಿ ದಲಿತರಿಗೆ, ಅಲ್ಪಸಂಖ್ಯಾತರಿಗೆ ಹಾಗೂ ಹಿಂದುಳಿದವರಿಗೆ ರಕ್ಷಣೆ ಇಲ್ಲ. ದೇಶದ ಪ್ರಧಾನಿ ಪ್ರತಿನಿದಿಸುವ ಗುಜರಾತ್ ನಲ್ಲಿ ದಲಿತರಿಗೆ ರಕ್ಷಣೆ ಇಲ್ಲ ಎಂದು ಮಾಜಿ ಕೇಂದ್ರ ಸಚಿ ಕೆ.ಎಚ್.ಮುನಿಯಪ್ಪ ಕಿಡಿಕಾರಿದರು. ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿದ ಬಳಿಕ ಸಣ್ಣ ವ್ಯಾಪಾರಸ್ಥನಿಂದ ಹಿಡಿದು ದೊಡ್ಡ ವ್ಯಾಪಾರಸ್ಥರಿಗೆ ನೆಮ್ಮದಿ ಇಲ್ಲ. ಕೇಂದ್ರ ಸರ್ಕಾರ ರೂಪಿಸುತ್ತಿರುವ ಯಾವ ಯೋಜನೆಯು ಜನಪವಾಗಿಲ್ಲ ಎಂದ ಅವರು ಸ್ಥಳೀಯ ನಗರ ಸಂಸ್ಥೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ವಾಣಿ ಕೃಷ್ಣಾರೆಡ್ಡಿ, ಉದಯಶಂಕರ್, ಈರಪ್ಪರೆಡ್ಡಿ, ಅತಾವುಲ್ಲಾ. ರಾಯಲ್ ರಾಮಕೃಷ್ಣಾರೆಡ್ಡಿ, ಗ್ಯಾಸ್ ಶ್ರೀನಿವಾಸ. ಕೋನಪಲ್ಲಿ ಕೋದಂಡ ಮತ್ತಿತರರು ಇದ್ದರು.