ವಾಡಿ: ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿಗರು ಅದನ್ನೇ ಬಂಡವಾಳ ಮಾಡಿಕೊಂಡು ದೇಶದ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಇವರ ಹಸಿ ಸುಳ್ಳಿಗೆ ಜನರು ಬೇಸತ್ತಿದ್ದಾರೆ. ಕಾಂಗ್ರೆಸ್ ಪರ ಅಲೆ ಸೃಷ್ಟಿಯಾಗಿದ್ದು, ಸುಳ್ಳು ಸಾರುವ ಕಮಲ ಗ್ಯಾಂಗ್ ಆಟ ಇನ್ನೂ ನಡೆಯೋದಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಮಹೆಮೂದ್ ಸಾಹೇಬ ವಾಗ್ಧಾಳಿ ನಡೆಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಕರೆಯ ಮೇರೆಗೆ ಪಟ್ಟಣದಲ್ಲಿ ಶನಿವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಏರ್ಪಡಿಸಲಾಗಿದ್ದ ಸದಸ್ಯತ್ವ ಅಭಿಯಾನ ಉದ್ದೇಶಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ. ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ರೂ. ಹಾಕುತ್ತೇವೆ. ವಿದ್ಯುತ್, ಪೆಟ್ರೋಲ್ ಮತ್ತು ಗ್ಯಾಸ್ ಬೆಲೆ ಇಳಿಕೆ ಮಾಡುತ್ತೇವೆ. ಉದ್ಯೋಗ ಕ್ರಾಂತಿಯನ್ನೇ ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದರು. ಅದೆಲ್ಲವನ್ನು ಭಾಷಣಕ್ಕೆ ಸೀಮಿತಗೊಳಿಸಿ ಈಗ ಮರೆತಿದ್ದಾರೆ. ಇರುವ ಉದ್ಯೋಗಗಳಿಗೆ ಭದ್ರತೆಯಿಲ್ಲ. ಅಡುಗೆ ಅನಿಲ, ವಿದ್ಯುತ್ ಮತ್ತು ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೇರಿ ನಿಂತಿದೆ. ದೇಶಕ್ಕಾಗಿ ಬೆಲೆ ಏರಿಕೆ ಸಹಿಸಿಕೊಳ್ಳಿ ಎಂದು ಹೇಳಲು ಇವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಿರಿಯ ಮುಖಂಡ ಟೋಪಣ್ಣ ಕೋಮಟೆ ಮಾತನಾಡಿ, ದೇಶದ ದೊಡ್ಡ ದೊಡ್ಡ ಶ್ರೀಮಂತರ ಹಣದಿಂದ ಚುನಾವಣೆ ಗೆದ್ದಿರುವ ಪ್ರಧಾನಿ ಮೋದಿಗೆ ಬಡವರ ಕಷ್ಟ ಅರ್ಥವಾಗುವುದಿಲ್ಲ. ದಲಿತರು, ಶೋಷಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಬಗ್ಗೆ ಕೇವಲ ಕಪಟ ಕಣ್ಣೀರು ಸುರಿಸುವವರ ಮುಖವಾಡ ಕಳಚಲು ಕಾಂಗ್ರೆಸ್ ರಣತಂತ್ರ ಹಣೆದಿದೆ. ಸೈನಿಕರ ಹೆಸರಿನಲ್ಲಿ ರಾಜಕಾರಣ ಮಾಡುವ ಬಿಜೆಪಿ ಸರ್ಕಾರದಲ್ಲೇ ಅತಿಹೆಚ್ಚು ಸೈನಿಕರು ದುರ್ಮರಣಕ್ಕೆ ಈಡಾಗಿದ್ದಾರೆ. ಸೈನಿಕರ ಸಾವಿನ ಮೇಲೆ ರಾಜಕಾರಣ ಮಾಡುವ ಬಿಜೆಪಿಗೆ ಯೋಧರ ಬೆಲೆ ಗೊತ್ತಿಲ್ಲ. ಜನರನ್ನು ಭಾವನಾತ್ಮಕವಾಗಿ ಸೆಳೆದು ಮೂರ್ಖರನ್ನಾಗಿ ಮಾಡಲಾಗುತ್ತಿದೆ. ದೇಶದಲ್ಲಿ ಅರಾಜಕತೆ ಉಂಟಾಗಿದೆ ಎಂದು ಟೀಕಿಸಿದರು.
ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಸಾಲೋಮನ್, ಎಸ್‌ಸಿ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸೈದಾಪುರ, ಮುಖಂಡರಾದ ಬಾಬುಮಿಯ್ನಾ, ಚಂದ್ರಸೇನ ಮೇನಗಾರ, ನಾಗೇಂದ್ರ ಜೈಗಂಗಾ, ಬಾಬುಮಿಯ್ನಾ, ಮಲ್ಲಯ್ಯ ಗುತ್ತೇದಾರ, ಸೂರ್ಯಕಾಂತ ರದ್ದೇವಾಡಿ, ಸಾಲೋಮನ್ ರಾಜಣ್ಣ, ನಾಸೀರ ಹುಸೇನ, ಬಸವರಾಜ ಕೇಶ್ವಾರ, ವಿಜಯಕುಮಾರ ಸಿಂಗೆ, ಶರಣಬಸು ಸಿರೂರಕರ, ಮಹ್ಮದ್ ಅಶ್ರಫ್ ಖಾನ್, ರಮೇಶ ಬಡಿಗೇರ, ಚಂದ್ರಶೇಖರ ಧನ್ನೇಕರ, ಪೃಥ್ವಿರಾಜ ಸೂರ್ಯವಂಶಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.