ಕೋಲ್ಕತ : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಂದು ಟಿಎಂಸಿ ವಿರುದ್ಧದ ಚುನಾವಣಾ ಕದನವನ್ನು ನೇರವಾಗಿ ಮಮತಾ ಬ್ಯಾನರ್ಜಿ ಅವರ ಭದ್ರ ಕೋಟೆಗೆ ಒಯ್ದು 2019ರ ಅಂತಿಮ ಹಂತದ ಚುನಾವಣೆಗೆ ಮುನ್ನ ಕೋಲ್ಕತದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಇಡಿಯ ಮಹಾನಗರಿಯನ್ನು ಕೇಸರಿಮಯ ಗೊಳಿಸಿದರು.
ಬಿಜೆಪಿಯ ಸಾವಿರಾರು ಮಂದಿ ಬೆಂಬಲಿಗರು ಕೋಲ್ಕತ ಬೀದಿಗೆ ಇಳಿದು ಅಮಿತ್ ಶಾ ಅವರನ್ನು ಭರ್ಜರಿಯಾಗಿ ಸ್ವಾಗತಿಸಿದರು. ಭಾರೀ ಜೋಶ್ ನಲ್ಲಿದ್ದಂತೆ ಕಂಡು ಬಂದ ಅಮಿತ್ ಶಾ ಪದೇ ಪದೇ ಗಾಳಿಗೆ ಗುದ್ದು ಹೊಡೆದು ವಿಜಯದ ಸೂಚನೆಯಾಗಿ ಎರಡು ಬೆರಳುಗಳನ್ನು ಎತ್ತಿ ತೋರಿಸಿದರು.
‘ಪಶ್ಚಿಮ ಬಂಗಾಲದಲ್ಲಿ ನಾವು ಪ್ರಜಾಸತ್ತೆಯನ್ನು ಪುನಶ್ಚೇತನಗೊಳಿಸಬೇಕಾಗಿದೆ. ಇಡಿಯ ದೇಶದಲ್ಲಿ ಈ ರಾಜ್ಯ ಮಾತ್ರವೇ ಚುನಾವಣಾ ಸಂಬಂಧಿ ಹಿಂಸೆಯನ್ನು ಕಂಡಿದೆ. ಇಲ್ಲಿನ ಜನರು ಮಮತಾ ಬ್ಯಾನರ್ಜಿ ವಿರುದ್ದ ತೀವ್ರವಾಗಿ ಕ್ರುದ್ಧರಾಗಿದ್ದಾರೆ ಮತ್ತು ನಮಗೆ ಇಲ್ಲಿ ಪೂರ್ಣ ಬೆಂಬಲ ಇರುವುದು ಎಲ್ಲೆಡೆ ಕಂಡು ಬರುತ್ತಿದೆ’ ಎಂದು ಅಮಿತ್ ಶಾ ಹೇಳಿದರು.
ಅಮಿತ್ ಶಾ ರೋಡ್ ಶೋ ಮೂಲತಃ ಸಾಹಿದ್ ಮಿನಾರ್ ಮೈದಾನದಿಂದ ಆರಂಭಗೊಳ್ಳುವುದಿತ್ತು; ಆದರೆ ಪೊಲೀಸರು ಅನುಮತಿ ನಿರಾಕರಿಸಿದ ಕಾರಣ ರೋಡ್ ಶೋವನ್ನು ಧರ್ಮತಾಲಾ ದಿಂದ ಆರಂಭಿಸಲಾಯಿತು. ಬಿಜೆಪಿ ಸಾಹಿದ್ ಮಿನಾರ್ ಮೈದಾನದಲ್ಲಿ ವೇದಿಕೆಯೊಂದನ್ನು ಸ್ಥಾಪಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿ ಅನುಮತಿ ನಿರಾಕರಿಸಲಾಗಿತ್ತು.
ಹಾಗಿದ್ದರೂ ರೋಡ್ ಶೋ ಆರಂಭಗೊಳ್ಳುವ ತಾಣವನ್ನು ಬದಲಾಯಿಸಲಾದ ಕಾರಣ ಬಿಜೆಪಿ ಕಾರ್ಯಕರ್ತರ ಹುರುಪು ಎಳ್ಳಷ್ಟೂ ಕಡಿಮೆಯಾಗಲಿಲ್ಲ.
ಸಹಸ್ರಾರು ಸಂಖ್ಯೆಯ ಜನರು ಬಿಜೆಪಿ ಬೆಂಬಲಿಸಿ ರೋಡ್ ಶೋ ನಲ್ಲಿ ಪಾಲ್ಗೊಂಡರು. ಆ ಮೂಲಕ ಬಿಜೆಪಿಗೆ ಕೋಲ್ಕತದಲ್ಲೂ ಇಡಿಯ ಪಶ್ಚಿಮ ಬಂಗಾಲದಲ್ಲೂ ಜನ ಬೆಂಬಲ ಇರುವುದು ಖಚಿತವಾಯಿತು.