ಬೆಂಗಳೂರು: 2019ರ ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯದಲ್ಲಿ ಬಿಜೆಪಿ ಪಾಲಿಗೆ ಐತಿಹಾಸಿಕ ದಾಖಲೆ ಆಗಿದ್ದರೆ, ಕಾಂಗ್ರೆಸ್ ಪಾಲಿಗೆ ಚಾರಿತ್ರಿಕ ಹಿನ್ನಡೆ ತಂದಿದೆ. ಬಿಜೆಪಿ ಈವರೆಗಿನ ತನ್ನ ಲೋಕಸಭಾ ಚುನಾವಣಾ ಇತಿಹಾಸದಲ್ಲಿ ಅತಿ ಹೆಚ್ಚು 25 ಸ್ಥಾನ ಗಳಿಸಿದ್ದರೆ, ಕೇವಲ 1 ಸ್ಥಾನವಷ್ಟೇ ಗಳಿಸಿರುವ ಕಾಂಗ್ರೆಸ್ ತನ್ನ ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಅತ್ಯಂತ ಕಳಪೆ ಸಾಧನೆ ತೋರಿದೆ.
ರಾಜ್ಯದಲ್ಲಿ 1980 ಮತ್ತು 1989 ನಂತರ ಒಂದೇ ಪಕ್ಷಕ್ಕೆ ಅತಿ ಹೆಚ್ಚು ಸ್ಥಾನ ಸಿಕ್ಕಿರುವುದು ಇದೇ ಮೊದಲು. ಆಗ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ 27ರಲ್ಲಿ ಗೆದ್ದಿತ್ತು. ಅದಾದ ಮೇಲೆ ಈ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಬಿಜೆಪಿ 25 ಸ್ಥಾನಗಳನ್ನು ಗಳಿಸಿದೆ. 2009ರಲ್ಲಿ ಅತಿ ಹೆಚ್ಚು 19 ಸ್ಥಾನ ಪಡೆದಿದ್ದ ಬಿಜೆಪಿ ಈ ಬಾರಿ ತನ್ನ ದಾಖಲೆಯನ್ನು ತಾನೇ ಹಿಂದಿಕ್ಕಿದೆ.
ಇದೇ ವೇಳೆ ಈವರೆಗೆ ನಡೆದ 17 ಲೋಕಸಭಾ ಚುನಾವಣೆಗಳಲ್ಲಿ ಈ ಬಾರಿಯದ್ದು ಕಾಂಗ್ರೆಸ್‌ನ ಅತ್ಯಂತ ಕಳಪೆ ಸಾಧನೆಯಾಗಿದ್ದು, ಕೇವಲ 1 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 1996ರಲ್ಲಿ ಕೇವಲ 5 ಸ್ಥಾನ ಪಡೆದಿದ್ದು ಕಾಂಗ್ರೆಸ್ ಪಕ್ಷದ ಈವರೆಗಿನ ಕಳಪೆ ಸಾಧನೆಯಾಗಿತ್ತು.
ಆಶ್ವರ್ಯವೆಂದರೆ 1991ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ 22 ಕ್ಷೇತ್ರಗಳನ್ನು ಗೆದ್ದಿದ್ದ ಕಾಂಗ್ರೆಸ್ ಮುಂದೆ 96ರಲ್ಲಿ 5 ಸ್ಥಾನಗಳಿಗೆ ಕುಸಿಯಿತು. ಈ ಚುನಾವಣೆಯಲ್ಲಿ 16 ಸ್ಥಾನ ಗೆಲ್ಲುವ ಮೂಲಕ ಜನತಾದಳ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
ಲೋಕಸಭೆಗೆ ನಡೆದ ಮೊದಲ ಚುನಾವಣೆಯಿಂದಲೂ ರಾಜ್ಯದಲ್ಲಿ ತನ್ನದೇ ಪಾರುಪತ್ಯ ಕಾಯ್ದುಕೊಂಡು ಬಂದಿದ್ದ ಕಾಂಗ್ರೆಸ್ 1996ರ ಬಳಿಕ ತನ್ನ ನೆಲೆಯನ್ನು ಕಳೆದುಕೊಳ್ಳಲಾರಂಭಿಸಿತು. 1991ರಲ್ಲಿ ನಾಲ್ಕು ಸ್ಥಾನ ಗೆದ್ದಿದ್ದ ಬಿಜೆಪಿ ಅದಾದ ಬಳಿಕ ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತಾ ಸಾಗಿತು. 1998ರಲ್ಲಿ ಬಿಜೆಪಿ ಮೊದಲ ಬಾರಿಗೆ ಅತಿ ಹೆಚ್ಚು 12 ಸ್ಥಾನಗಳನ್ನು ಗಳಿಸಿತ್ತು. ಕ್ರಮೇಣ 2019ರ ಚುನಾವಣೆವರೆಗೂ ತನ್ನ ಏರಿಕೆ ಕ್ರಮಾಂಕವನ್ನು ಬಿಜೆಪಿ ಕಾಯ್ದುಕೊಂಡು ಬಂದಿದೆ. ಇದೇ ವೇಳೆ 2014ರ ಚುನಾವಣೆ ಹೊರತುಪಡಿಸಿ 1996ರಿಂದ 2009ರವರೆಗಿನ ಪ್ರತಿ ಚುನಾವಣೆಯಲ್ಲೂ ಇಳಿಕೆ ಕ್ರಮಾಂಕದಲ್ಲಿ ಸಾಗಿ ಬಂದಿದೆ.
ಬಿಜೆಪಿ, ಕಾಂಗ್ರೆಸ್, ಜನತಾದಳ, ಜೆಡಿಎಸ್ ಹೊರತುಪಡಿಸಿ ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ, ಪ್ರಜಾ ಸೋಶಿಯಲಿಸ್ಟ್ ಪಾರ್ಟಿ, ಅಂಬೇಡ್ಕರ್ ಸ್ಥಾಪಿತ ಶೆಡೂಲ್ಡ್ ಕಾಸ್ಟ್ಸ್ ಫೆಡರೇಷನ್ (ಎಸ್‌ಸಿಎಫ್), ಲೋಕ ಸೇವಕ ಸಂಘ, ಸಂಯುಕ್ತ ಸೋಷಿಯಲಿಸ್ಟ್ ಪಾರ್ಟಿ, ಸ್ವತಂತ್ರ, ಭಾರತೀಯ ಲೋಕ ದಳ, ಜನತಾಪಾರ್ಟಿ, ಎಸ್. ಬಂಗಾರಪ್ಪ ಸ್ಥಾಪಿತ ಕರ್ನಾಟಕ ಕಾಂಗ್ರೆಸ್ ಪಕ್ಷ, ಲೋಕಶಕ್ತಿ, ಜೆಡಿಯು, ಸಮಾಜವಾದಿ ಪಾರ್ಟಿ ಪಕ್ಷಗಳಿಂದ ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
* ರಫೀಕ್ ಅಹ್ಮದ್