Advertisement

ಬಿಜೆಪಿ ಹಿಂದುತ್ವ ವೈರಸ್‌ ಸಮರ್ಥವಾಗಿ ಎದುರಿಸಿ: ಸಿದ್ದರಾಮಯ್ಯಕರೆ

06:00 AM Jul 29, 2018 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ಗೆ ಸವಾಲಾಗಿರುವ ಬಿಜೆಪಿಯ ಹಿಂದುತ್ವ ವೈರಸ್‌ ಅನ್ನು ಸಮರ್ಥವಾಗಿ ಎದುರಿಸಲು ಕಾರ್ಯಕರ್ತರು ಸಿದ್ದರಾಗುವಂತೆ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಕೆಪಿಸಿಸಿಯ ನೂತನ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರಿಗೆ ಶನಿವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಬಿಜೆಪಿ ಕೋಮುವಾದಿ ವೈರಸ್‌ ಕಾರಣವಾಗಿತ್ತು.ಹೀಗಾಗಿ, ಲೋಕಸಭೆ ಚುನಾವಣೆಯಲ್ಲಿ ಆ ವೈರಸ್‌ ಮತ್ತೆ ಕೆಲಸ ಮಾಡದಂತೆ ತಡೆಯಬೇಕಾಗಿದೆ ಎಂದು ತಿಳಿಸಿದರು.

ಬಿಜೆಪಿಯ ಅಂಗ ಸಂಸ್ಥೆಗಳು ಜನರ ತಲೆಯಲ್ಲಿ ಇಲ್ಲ ಸಲ್ಲದ ಸುಳ್ಳುಗಳನ್ನು ತುಂಬಲು ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಪ್ರಯತ್ನಿಸಬಹುದು.ಅಂತಹ ಪ್ರಯತ್ನ ತಡೆಯಲು ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮುಖಂಡರು ಸಹ ವ್ಯವಸ್ಥಿತ ಕಾರ್ಯತಂತ್ರ ರೂಪಿಸಬೇಕು ಎಂದು ಹೇಳಿದರು.

2013 ರ ವಿಧಾನಸಭೆ ಚುನಾವಣೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್‌ 19 ಸ್ಥಾನ ಗಳಿಸಿದ್ದರೆ, ಬಿಜೆಪಿ 3 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಆದರೆ, 2018 ರ ಚುನಾವಣೆಯಲ್ಲಿ ಬಿಜೆಪಿ 16 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಅದಕ್ಕೆ ಕಾರಣ ಪ್ರತಿ 33 ಜನರಿಗೆ ಒಬ್ಬ ಕಾರ್ಯಕರ್ತರನ್ನು ನೇಮಿಸಲಾಗಿತ್ತು. ಆತ ಪ್ರತಿ ದಿನ ಮತದಾರರನ್ನು ಭೇಟಿ ಮಾಡಿ, ಕಾಂಗ್ರೆಸ್‌ ಹಾಗೂ ಮುಸ್ಲಿಂ ಸಮುದಾಯದ ವಿರುದ್ಧ ಅಪ ಪ್ರಚಾರ ಮಾಡುವ ಕೆಲಸ ಮಾಡಿದ್ದರು.ಮುಂದಿನ ಲೋಕಸಭೆ ಚುನಾವಣೆಯಲ್ಲಿ ಇದು ಪುನರಾವರ್ತನೆಯಾಗಬಾರದಂತೆ ನೋಡಿಕೊಳ್ಳಬೇಕು ಎಂದುತ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ದುರಾಡಳಿತದಿಂದ ದೇಶ ಸಾಕಷ್ಟು ಹಿಂದೆ ಉಳಿದಿದೆ. ದಲಿತರು ಹಾಗೂ ಹಿಂದುಳಿದವರು ನೆಮ್ಮದಿಯಿಂದ ಬದುಕಲು ಸಾಧ್ಯವಾಗದಂತಹ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ದೇಶ ಉಳಿಯಬೇಕಾದರೆ ಪ್ರಧಾನಿ ನೇತೃತ್ವದ ಬಿಜೆಪಿ ಸೋಲಿಸುವುದೊಂದೇ ಪರಿಹಾರ ಎಂದು ಹೇಳಿದರು.

Advertisement

ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌ ಮಾತನಾಡಿ,  ಬಿಜೆಪಿ ಸುಳ್ಳು ಹೇಳುವ ಮೂಲಕ ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿದರು.

ಮೋದಿ ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಮೋದಿಯನ್ನು ಎದುರಿಸುವ ಶಕ್ತಿ ರಾಹುಲ್‌ ಗಾಂಧಿಗೆ ಮಾತ್ರ ಇದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.

ದೂರ ಉಳಿದ ಹಿರಿಯರು
ಕೆಪಿಸಿಸಿ ನೂತನ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷ ಹಾಗೂ ಎಐಸಿಸಿ ಕಾರ್ಯದರ್ಶಿ ಸನ್ಮಾನ ಕಾರ್ಯಕ್ರಮದಲ್ಲಿ ಬಹುತೇಕ ನಾಯಕರು ದೂರ ಉಳಿದಿದ್ದರು. ಸನ್ಮಾನ ಸಮಾರಂಭ ಆಯೋಜಿಸಲು ಪಕ್ಷದ ವಿವಿಧ ಘಟಕಗಳಲ್ಲಿ ಕೆಲಸ ಮಾಡಿದ್ದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ.  ದಿನೇಶ್‌ ಗುಂಡೂರಾವ್‌ ಅಧ್ಯಕ್ಷರಾದ ಮೇಲೆ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಮುನಿಸಿಕೊಂಡು  ಮೂಲ ಕಾಂಗ್ರೆಸ್ಸಿಗರು ಕಾರ್ಯಕ್ರಮದಿಂದ ದೂರ ಉಳಿದಿದ್ದರು ಎನ್ನಲಾಗಿದೆ. ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌, ಸಚಿವರಾದ  ಡಿ.ಕೆ. ಶಿವಕುಮಾರ್‌,  ಕೆ.ಜೆ. ಜಾರ್ಜ್‌, ಕೃಷ್ಣ ಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಮಾಜಿ ಸಚಿವ ಎಚ್‌.ಆಂಜನೇಯ, ವಿಧಾನಪರಿಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌ ಅವರನ್ನು ಈ ಕಾರ್ಯಕ್ರಮದಿಂದ ದೂರ ಇಡಲಾಗಿತ್ತು. ಪಕ್ಷಕ್ಕೆ ಹೊಸದಾಗಿ ಬಂದಿರುವ ಜಮೀರ್‌ ಅಹಮದ್‌, ಅಖಂಡ ಶ್ರೀನಿವಾಸಮೂರ್ತಿ  ಭಾವ ಚಿತ್ರಗಳು ಬ್ಯಾನರ್‌ಗಳು ರಾರಾಜಿಸುತ್ತಿದ್ದವು. ಇದೂ ಸಹ ಮೂಲ ಕಾಂಗ್ರೆಸ್ಸಿಗರ ಕೋಪಕ್ಕೆ ಕಾರಣ ಎಂಬ ಮಾತು ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next