Advertisement

ಬಿಜೆಪಿ ಮಹಾ ಸಂಪರ್ಕ ಅಭಿಯಾನ

09:46 AM Nov 28, 2019 | Team Udayavani |

ಬೆಂಗಳೂರು: ಬೇರೆ ಪಕ್ಷದಿಂದ ಬಂದು ಕಣಕ್ಕಿಳಿದಿರುವ ಅಭ್ಯರ್ಥಿಗಳ ಬೆಂಬಲಿಗರು ಹಾಗೂ ಪಕ್ಷದ ಮೂಲ ಕಾರ್ಯಕರ್ತರ ನಡುವೆ ಸಮನ್ವಯ ಸಾಧಿಸಲು ಸಹಾಯವಾಗುವಂತೆ ರಾಜ್ಯ ಬಿಜೆಪಿ ಇದೇ ಶನಿವಾರ ಹಾಗೂ ರವಿವಾರ “ಮಹಾ ಸಂಪರ್ಕ ಅಭಿಯಾನ’ ಕಾರ್ಯಕ್ರಮ ಆಯೋಜಿಸಿದೆ.

Advertisement

ಈ ಕಾರ್ಯಕ್ರಮದಡಿ ಪ್ರತಿ ಬೂತ್‌ ವ್ಯಾಪ್ತಿಯ ಮತದಾರರನ್ನು ಭೇಟಿಯಾಗಿ ಮತ ಯಾಚಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಉಪ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ ಅದಕ್ಕೆ ಪಕ್ಷದ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳ ಹಿಂಬಾಲಕರನ್ನು ನಿಯೋಜಿಸಿ ಪ್ರಚಾರ ನಡೆಸಲಾಗುವುದು. ಆ ಮೂಲಕ ಮೂಲ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳ ಹಿಂಬಾಲಕರ ನಡುವೆ ಸಮನ್ವಯ ಸಾಧಿಸಬಹುದು. ಜತೆಗೆ ನಾನಾ ಮೋರ್ಚಾಗಳ ಪ್ರಮುಖರು ಇರಲಿದ್ದಾರೆ. ಹಾಗೆಯೇ ಸಂಘ ಪರಿವಾರದವರು, ಸಂಘ ಸಂಸ್ಥೆ, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಮತದಾನಕ್ಕೆ ನಾಲ್ಕು ದಿನ ಬಾಕಿ ಇರುವಂತೆ ನಡೆಯುವ ಅಭಿಯಾನದ ಮೂಲಕ ಸಂಘಟನೆ ಬಲಪಡಿಸಿಕೊಳ್ಳುವುದು ಕಮಲ ಪಕ್ಷದ ಲೆಕ್ಕಾಚಾರ. ಜತೆಗೆ ಹೊಸದಾಗಿ ಪಕ್ಷ ಸೇರ್ಪಡೆಯಾದವರಿಗೂ ಪಕ್ಷದ ಕಾರ್ಯವೈಖರಿಯ ಪರಿಚಯವಾಗಲಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದರು.

ಕಾಂಗ್ರೆಸ್‌, ಜೆಡಿಎಸ್‌ನಿಂದ ಪಕ್ಷಕ್ಕೆ ಸೇರ್ಪಡೆಯಾದ ಕಾರ್ಯ ಕರ್ತರು ಪಕ್ಷದ ಮೂಲ ಕಾರ್ಯಕರ್ತರೊಂದಿಗೆ ಬೆರೆತು ಸಂಘಟಿತವಾಗಿ ಮುಂದುವರಿಯಲು ಈ ಪ್ರಯತ್ನ ಸಹಕಾರಿಯಾಗುವ ವಿಶ್ವಾಸವಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಪ್ರಚಾರ ವೈಖರಿ
ಉಪ ಚುನಾವಣೆ ಎದುರಾಗಿರುವ 15 ಕ್ಷೇತ್ರಗಳಲ್ಲಿ ಸರಿಸುಮಾರು 4,185 ಮತಗಟ್ಟೆಗಳಿವೆ. ಈ ಮತಗಟ್ಟೆ ವ್ಯಾಪ್ತಿಯ ಮತದಾರರನ್ನು ಸ್ಥಳೀಯ ಪ್ರಮುಖರು, ಕಾರ್ಯ ಕರ್ತರು ನೇರವಾಗಿ ಭೇಟಿಯಾಗಬೇಕು. ಕೇಂದ್ರ ಸರಕಾರದ ಕೊಡುಗೆಗಳ ಬಗ್ಗೆ ತಿಳಿಸಿಕೊಡಬೇಕು. ಹಾಗೆಯೇ ರಾಜ್ಯ ಬಿಜೆಪಿ ಸರಕಾರದ 100 ದಿನಗಳ ಆಡಳಿತ ಸಾಧನೆ, ಕೊಡುಗೆಗಳ ಬಗ್ಗೆಯೂ ಮಾಹಿತಿ ನೀಡಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿರುವುದರಿಂದ ರಾಜ್ಯಕ್ಕಾಗುವ ಅನುಕೂಲಗಳ ಬಗ್ಗೆ ತಿಳಿಸಿ ಮತ ಯಾಚಿಸುವುದು ಅಭಿಯಾನದ ಉದ್ದೇಶ. ಮುಖ್ಯವಾಗಿ ಅಭ್ಯರ್ಥಿ ಹೆಸರು, ಪಕ್ಷ, ಚಿಹ್ನೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಿದ್ದಾರೆ.

- ಎಂ. ಕೀರ್ತಿಪ್ರಸಾದ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next