ಉತ್ತರ ಪ್ರದೇಶ ರಾಜಧಾನಿ ಲಕ್ನೋದಿಂದ ಈಶಾನ್ಯದಿಂದ 125 ಕಿಮೀ ದೂರ ಇರುವ ಜಿಲ್ಲೆಯೇ ಬಹ್ರೈಚ್. ಸರಯೂ ನದಿ ತೀರದಲ್ಲಿದೆ ಈ ನಗರ. ಇಲ್ಲಿಂದ ನೇಪಾಳ ಗಡಿಗೆ 50 ಕಿಮೀ ದೂರವಷ್ಟೇ ಇದೆ. ಇದೊಂದು ಲೋಕಸಭಾ ಕ್ಷೇತ್ರವೂ ಹೌದು. 2014ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದ ಸಾವಿತ್ರಿ ಬಾಯಿ ಪುಲೆ 4,32, 392 ಮತಗಳನ್ನು ಪಡೆದುಕೊಂಡಿದ್ದರು. ಸಮಾಜವಾದಿ ಪಕ್ಷದ ಅಭ್ಯರ್ಥಿಗೆ 3,36, 747 ಮತಗಳು ಬಂದಿದ್ದವು.
ಆದರೆ ಈ ಬಾರಿಯ ಚುನಾವಣೆಯ ಹೈಲೈಟ್ ಎಂದರೆ ಬಿಜೆಪಿ ಅಭ್ಯರ್ಥಿಯಾಗಿದ್ದ ನಾಯಕಿ ಈ ಬಾರಿ ಕಾಂಗ್ರೆಸ್ ಹುರಿಯಾಳಾಗಿ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 6-8 ತಿಂಗಳ ಹಿಂದಷ್ಟೇ ಅವರು ಪಕ್ಷದ ನಿಲುವುಗಳನ್ನು ಖಂಡಿಸಿ ಸಂಸತ್ ಸದಸ್ಯತ್ವ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಹೀಗಾಗಿ ಬಿಜೆಪಿ ವತಿಯಿಂದ ಅಕ್ಷಯ್‌ವರ್ ಲಾಲ್ ಗೌರ್ ಅವರನ್ನು ಕಣಕ್ಕೆ ಇಳಿಸಿದೆ.
ಈ ಕ್ಷೇತ್ರ ಮತ್ತು ಕರ್ನಾಟಕದ ನಡುವೆ ಒಂದು ಬಾದರಾಯಣ ಸಂಬಂಧವಿದೆ. ಸ್ವಾತಂತ್ರ್ಯ ಹೋರಾಟಗಾರ ಮತ್ತು ಆಗಿನ ಕಾಲದ ಬಾಂಬೆ ಪ್ರಾಂತ್ಯದ ರಾಜ್ಯಪಾಲರಾಗಿದ್ದ ರಫೀ ಅಹ್ಮದ್ ಕಿದ್ವಾಯಿ ಹೆಸರಿನಲ್ಲಿ ಬೆಂಗಳೂರಿನಲ್ಲಿರುವ ರಾಜ್ಯ ಸರ್ಕಾರದ ಕ್ಯಾನ್ಸರ್ ಸಂಸ್ಥೆ ಇದೆ. ಅದುವೇ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ. 1973ರಲ್ಲಿ ಶುರುವಾದ ಈ ಸಂಸ್ಥೆಗೆ 20 ಎಕರೆ ಜಮೀನು, ಆಗಿನ ಕಾಲಕ್ಕೆ ರೇಡಿಯೋಥೆರಪಿ ಮಷಿನ್ ಖರೀದಿಗಾಗಿ 1 ಲಕ್ಷ ರೂ. ನೀಡಿದ್ದ ಹೆಗ್ಗಳಿಕೆ ಅವರದ್ದು. ಅವರು ಈ ಕ್ಷೇತ್ರದ ಮೊದಲ ಸಂಸದ.
ಅವರಲ್ಲದೆ, ಕೇರಳದಲ್ಲಿ ಜನಿಸಿ ಆಗಿನ ಕಾಲದ ಇಂಡಿಯನ್ ಸಿವಿಲ್ ಸರ್ವಿಸ್ ಅಧಿಕಾರಿಯಾಗಿ, ಅಯೋಧ್ಯೆ ವಿವಾದಕ್ಕೆ ರಾಷ್ಟ್ರೀಯ ಸ್ವರೂಪ ನೀಡಿದ್ದ ಕೆ.ಕೆ.ನಯ್ಯರ್ ಕೂಡ ಈ ಕ್ಷೇತ್ರದ ಸಂಸದರಾಗಿದ್ದರು. 2009ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕಮಲ್ ಕಿಶೋರ್ ಗೆದ್ದು ಲೋಕಸಭೆ ಪ್ರವೇಶಿಸಿದರೆ, ಈಗಿನ ಬಿಜೆಪಿ ಅಭ್ಯರ್ಥಿ ಅಕ್ಷಯ್‌ವರ್‌ಲಾಲ್ 72, 492 ಮತಗಳನ್ನು ಪಡೆದುಕೊಂಡಿದ್ದರು.
ಈ ಬಾರಿ ಎಸ್‌ಪಿ- ಬಿಎಸ್‌ಪಿ ಮೈತ್ರಿ ಮಾಡಿಕೊಂಡು ಎಸ್‌ಪಿ ನಾಯಕ ಶಬ್ಬೀರ್ ಅಹ್ಮದ್‌ರನ್ನು ಕಣಕ್ಕೆ ಇಳಿಸಿದೆ. ಹೀಗಾಗಿ, ಬಿಜೆಪಿ ಅಭ್ಯರ್ಥಿಗೆ ಕೊಂಚ ಕಠಿಣ ಪರಿಸ್ಥಿತಿ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. 1996ರ ಬಳಿಕ ಈ ಲೋಕಸಭಾ ಕ್ಷೇತ್ರದಲ್ಲಿ ಒಂದೇ ಪಕ್ಷದ ಅಭ್ಯರ್ಥಿ ಗೆದ್ದಿಲ್ಲ. 1991ರಲ್ಲಿ ಬಿಜೆಪಿ ಮೊದಲ ಬಾರಿಗೆ ಇಲ್ಲಿ ಜಯ ಸಾಧಿಸಿತು. 1996, 1999, 2014ರಲ್ಲಿ ಮತ್ತೆ ಅದು ಗೆದ್ದಿತ್ತು.
2017ರಲ್ಲಿ ನಡೆದಿದ್ದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಾವಿತ್ರಿ ಬಾಯಿ ಪುಲೆ ತಮ್ಮ ನಿಕಟವರ್ತಿಯಾಗಿದ್ದ ಅಕ್ಷಯವರ್ ಕನೌಜಿಯಾದೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವ ಬಗ್ಗೆ ಪ್ರಯತ್ನಿಸಿದ್ದರು.
ಈ ಬಾರಿ ಕಣದಲ್ಲಿ
ಅಕ್ಷಯ್‌ವರ್ ಲಾಲ್ ಗೌರ್ (ಬಿಜೆಪಿ)
ಶಬ್ಬೀರ್ ಅಹ್ಮದ್ (ಎಸ್‌ಪಿ)
ಸಾವಿತ್ರಿ ಬಾಯಿ ಪುಲೆ (ಕಾಂಗ್ರೆಸ್)