Advertisement

ಬಿಜೆಪಿಯ ಏಕನಾಥ್‌ ಖಡ್ಸೆಗೆ ರಾಜ್ಯ ಸಭೆಯ ಆಫರ್‌ ?

11:11 AM Mar 08, 2020 | sudhir |

ಮುಂಬಯಿ:ಮುಂಬರುವ ರಾಜ್ಯಸಭಾ ಚುನಾವಣೆಗಾಗಿ ಬಿಜೆಪಿ ವತಿಯಿಂದ ಮೂವರು ಅಭ್ಯರ್ಥಿಗಳನ್ನು ಹೆಸರು ನಿರ್ಧರಿಸಿದೆ ಎಂಬ ಮಾಹಿತಿ ವರದಿಯಾಗಿದೆ. ಇದರಲ್ಲಿ ಏಕನಾಥ್‌ ಖಡ್ಸೆ ಹೆಸರು ಅನಿರೀಕ್ಷಿತವಾಗಿ ಹೊರಬಂದಿದೆ. ಪಕ್ಷದ ವರಿಷ್ಠ ನಾಯಕರು ರಾಜ್ಯಸಭೆಗಾಗಿ ಏಕನಾಥ ಖಡ್ಸೆ, ಉದಯನ್‌ ರಾಜೇ ಭೋಸ್ಲೆ ಮತ್ತು ರಾಮದಾಸ್‌ ಅಠವಳೆ ಅವರ ಹೆಸರಿಗೆ ಮೊಹರು ಮಾಡಿದ್ದಾರೆಂದು ಹೇಳಲಾಗಿದೆ.

Advertisement

ಭೋಸರಿ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕನಾಥ್‌ ಖಡ್ಸೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅನಂತರ, ರಾಜ್ಯ ರಾಜಕೀಯಕ್ಕೆ ಆಗಮಿಸಿದ ದೇವೇಂದ್ರ ಫಡ್ನವೀಸ್‌ ಅವರೊಂದಿಗಿನ ವಿವಾದದಿಂದಾಗಿ ಖಡ್ಸೆ ಅವರ ರಾಜಕೀಯದ ಆಗಮಕ್ಕೆ ಅನೇಕ ಅಡೆತಡೆಗಳು ಎದುರಾಯಿತು. ಅಷ್ಟೇ ಅಲ್ಲದೆ, ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಕೂಡಾ ಅವರನ್ನು ತಿರಸ್ಕರಿಸಿತ್ತು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ, ಏಕನಾಥ್‌ ಖಡ್ಸೆ ಅವರು, ಫಡ್ನವೀಸ್‌ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಇದರ ಪರಿಣಾಮವಾಗಿ ರಾಜ್ಯದ ಬಿಜೆಪಿ ನಾಯಕರಲ್ಲಿ ಆಂತರಿಕ ಬಿರುಕು ನಿರ್ಮಾಣವಾಗಿತ್ತು.

ಅದಕ್ಕಾಗಿಯೇ ಏಕನಾಥ್‌ ಖಡ್ಸೆಯನ್ನು ನೇರವಾಗಿ ದಿಲ್ಲಿಗೆ ಕಳುಹಿಸಲಾಗುವುದು ಮತ್ತು ರಾಜ್ಯ ರಾಜಕಾರಣದಲ್ಲಿ ಉಂಟಾಗುತ್ತಿದ್ದ ಸಮಸ್ಯೆ ಹೊರಗಿಡಲಾಗುವುದು ಎಂದು ವರದಿಯಾಗಿದೆ. ಖಡ್ಸೆ ಅವರು ರಾಜ್ಯಸಭೆಗೆ ಹೋಗಬೇಕು ಎಂಬುವುದು ರಾಜ್ಯದ ನಾಯಕರ ಬೇಡಿಕೆಯೂ ಆಗಿತ್ತು. ಆದ್ದರಿಂದ ಖಡ್ಸೆ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದೇ ಪ್ರಶ್ನೆ.

ಮಹಾರಾಷ್ಟ್ರದ ಕೋಟಾದಿಂದ ರಾಜ್ಯಸಭೆಗೆ ಆಯ್ಕೆಯಾದ ಏಳು ಸಂಸದರ ಅಧಿಕಾರಾವಧಿಯು ಮುಂದಿನ ಎಪ್ರಿಲ್‌ನಲ್ಲಿ ಕೊನೆಗೊಳ್ಳಲಿದೆ. ಎಲ್ಲಾ ಏಳು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌, ಎನ್‌ಸಿಪಿ ಮತ್ತು ಶಿವಸೇನೆ ಮೈತ್ರಿಯ ಮಹಾವಿಕಾಸ್‌ ಆಘಾಡಿಯು ಮೊದಲ ಬಾರಿಗೆ ಸ್ಪರ್ಧಿಸಲಿದೆ.

ರಾಜ್ಯಸಭೆಗಾಗಿ ಮಹಾವಿಕಾಸ್‌ ಆಘಾಡಿಯ ಸಂಖ್ಯಾ ಬಲವನ್ನು ಗಮನಿಸಿದರೆ, ಇದರಲ್ಲಿ ಎರಡು ಸ್ಥಾನಗಳಲ್ಲಿ ಶರದ್‌ ಪವಾರ್‌ ಮತ್ತು ಫೌಜಿಯಾ ಖಾನ್‌ ಅವರ ಹೆಸರನ್ನು ಎನ್‌ಸಿಪಿ ಬಹುತೇಕ ಖಚಿತಪಡಿಸಿದೆ. ಕಾಂಗ್ರೆಸ್‌ ಮತ್ತು ಶಿವಸೇನೆಯು ಇನ್ನೂ ತಮ್ಮ ಹೆಸರನ್ನು ಘೋಷಿಸಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next