ಕೋಲಾರ: ವಿಧಾನಸಭಾ ಚುನಾವಣೆಯಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಪಡೆದುಕೊಂಡಿರುವ ಮತಗಳು ಹಾಲಿ ಬಿಜೆಪಿ ಸದಸ್ಯರಿಗೆ ಎಚ್ಚರಿಕೆ ಗಂಟೆ ಮೊಳಗಿಸಿದೆ.
2019 ರ ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ 7.07 ಲಕ್ಷ ಮತಗಳನ್ನು ಪಡೆಯುವ ಮೂಲಕ 2 ಲಕ್ಷ ಮತಗಳ ಅಂತರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿತ್ತು. 2023 ರ ವಿಧಾನಸಭಾ ಚುನಾವಣೆ ಈ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಗಳಿಸಿರುವುದು ಕೇವಲ 1.93 ಲಕ್ಷ ಮತಗಳನ್ನು ಮಾತ್ರ. ಈ ಮತಗಳ ಆಧಾರದಲ್ಲಿ ಬಿಜೆಪಿಯು 5.14 ಲಕ್ಷ ಮತಗಳ ಕೊರತೆ ಎದುರಿಸುವ ಮೂಲಕ ಎಚ್ಚರಿಕೆಯನ್ನು ಎದುರಿಸುತ್ತಿದೆ.
3ನೇ ಸ್ಥಾನಕ್ಕೆ ಬಿಜೆಪಿ: 2023ರ ವಿಧಾನಸಭಾ ಚುನಾವಣೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾಂಗ್ರೆಸ್ 5.79 ಲಕ್ಷ ಮತಗಳನ್ನು ಪಡೆದುಕೊಂಡಿದ್ದರೆ, ಬಿಜೆಪಿ ಕೇವಲ 1.93 ಲಕ್ಷ ಮತ್ತು ಜೆಡಿಎಸ್ 4.71 ಲಕ್ಷ ಮತಗಳನ್ನು ಪಡೆದುಕೊಂಡು ಎರಡನೇ ಸ್ಥಾನದಲ್ಲಿದ್ದು, ಬಿಜೆಪಿ ಮೂರನೇ ಸ್ಥಾನಕ್ಕೆ ನೂಕಲ್ಪಟ್ಟಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿದಾಗ 4.98 ಲಕ್ಷ ಮತಗಳನ್ನು ಪಡೆದುಕೊಂಡಿದ್ದರೆ, 2023ರ ಚುನಾವಣೆಯಲ್ಲಿ ಏಕಾಂಗಿಯಾಗಿ 5.79 ಲಕ್ಷ ಮತಗಳನ್ನು ಪಡೆದುಕೊಳ್ಳುವ ಮೂಲಕ 81,300 ಕ್ಕೂ ಹೆಚ್ಚು ಮತಗಳನ್ನು ಪಡೆದು ಮತಗಳಿಕೆಯಲ್ಲಿ ಗಣನೀಯ ಸಾಧನೆ ಮಾಡಿದೆ.
1.93 ಲಕ್ಷ ಮತ ಪಡೆದ ಬಿಜೆಪಿ: 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆ.ಎಚ್. ಮುನಿಯಪ್ಪ ಪುತ್ರಿ ಪ್ರತಿನಿಧಿಸುತ್ತಿದ್ದ ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರವೇ ಕಾಂಗ್ರೆಸ್ 11,253 ಮತಗಳನ್ನು ಬಿಜೆಪಿಗಿಂತಲೂ ಹೆಚ್ಚು ಪಡೆದುಕೊಂಡಿತ್ತು. ಆದರೆ, ಕೋಲಾರ, ಮುಳಬಾಗಿಲು, ಮಾಲೂರು, ಶ್ರೀನಿವಾಸಪುರ, ಶ್ರೀನಿವಾಸಪುರ, ಶಿಡ್ಲಘಟ್ಟ,ಚಿಂತಾಮಣಿಯಲ್ಲಿ ಬಿಜೆಪಿ ಕಾಂಗ್ರೆಸ್‌ಗಿಂತಲೂ ಹೆಚ್ಚು ಮತಗಳನ್ನು ಪಡೆದುಕೊಂಡಿತ್ತು. 2023ರ ವಿಧಾನಸಭಾ ಚುನಾವಣೆಯ ಮತಗಳನ್ನೇ ಅವಲೋಕಿಸಿದರೆ ಕಾಂಗ್ರೆಸ್ 5.79 ಲಕ್ಷ ಮತಗಳ ಪಡೆದು ಮೊದಲ ಸ್ಥಾನದಲ್ಲಿದ್ದರೆ, ಜೆಡಿಎಸ್ 4.71 ಲಕ್ಷಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಅಂತರ ಸುಮಾರು 80 ಸಾವಿರ ಮತಗಳಾಗಿವೆ. ಬಿಜೆಪಿ ಕೇವಲ 1.93 ಲಕ್ಷ ಮತಗಳನ್ನು ಪಡೆದುಮೂರನೇ ಸ್ಥಾನಕ್ಕೆ ದೂಕಲ್ಪಟ್ಟಿದೆ.
ಕೈ-ಕಮಲಕ್ಕೆ ದಳ ಪೈಪೋಟಿ: ಸಾಮಾನ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿಯೇ ಲೋಕಸಭಾ ಚುನಾವಣೆಗಳು ನಡೆಯುವುದರಿಂದ ಮೋದಿ ಅಲೆಯೇ ಹಿಂದಿನ ಚುನಾವಣೆಗೆ ಹೋಲಿಸಿದರೆ ಕೊರತೆಯಾಗಿರುವ 5.11 ಲಕ್ಷ ಮತಗಳನ್ನು ತಂದು ಕೊಡುತ್ತದೆಯೇ ಎಂಬುದನ್ನು ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಜೆಡಿಎಸ್ 2023ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ 4.71 ಲಕ್ಷ ಮತ ಪಡೆದು ಕಾಂಗ್ರೆಸ್‌ಗಿಂತಲೂ ಕೇವಲ 80 ಸಾವಿರ ಮತಗಳಷ್ಟು ಹಿಂದಿದ್ದು, ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಕಾಂಗ್ರೆಸ್ ಬಿಜೆಪಿಗೆ ಪೈಪೋಟಿ ನೀಡುವಷ್ಟು ಸಮರ್ಥವಾ ಗಿರುವುದು ವಿಶೇಷವೆನಿಸಿದೆ.
– ಕೆ.ಎಸ್.ಗಣೇಶ್