ಪಟನಾ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಬಿಜೆಪಿಗೆ ಈಗ ಬಿಹಾರದಲ್ಲಿನ ತಮ್ಮ ಭವಿಷ್ಯದ ಬಗ್ಗೆ ಭೀತಿ ಶುರುವಾಗಿದೆ ಹಾಗಾಗಿಯೇ ನಮ್ಮ ವಿರುದ್ಧ ರಾಜಕೀಯ ಪ್ರೇರಿತ ಷಡ್ಯಂತ್ರಗಳಿಗೆ ಮುಂದಾಗಿದ್ದಾರೆ ಎಂದು ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಹೇಳಿದ್ದಾರೆ.
ಉದ್ಯೋಗಕ್ಕಾಗಿ ಜಮೀನು ಹಗರಣ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ತೇಜಸ್ವಿ ಅವರ ತಾಯಿ, ಮಾಜಿ ಸಿಎಂ ರಾಬ್ಡಿ ದೇವಿ ಅವರನ್ನು ವಿಚಾರಣೆಗೊಳಪಡಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ತೇಜಸ್ವಿ, “ಇದನ್ನು ನಾವು ನಿರೀಕ್ಷಿಸಿದ್ದವು.ಅವರು ( ಬಿಜೆಪಿ)ನಮ್ಮನ್ನು ಗುರಿಯಾಗಿಸುತ್ತಾರೆಂಬುದೂ ತಿಳಿದಿದೆ ಕಾರಣ ಕರ್ನಾಟಕದ ಬಳಿಕ ಬಿಹಾರದ ಬಗ್ಗೆ ಬಿಜೆಪಿಗೆ ಚಿಂತೆ ಶುರುವಾಗಿದೆ. ಬಹುಶಃ ಈ ಪ್ರಕರಣದಲ್ಲಿ ನನ್ನನ್ನೂ ಸಿಲುಕಿಸಬಹುದು ಆದರೆ, ನಾನು ಯಾವುದೇ ಅಪರಾಧ ಮಾಡಿಲ್ಲ ಹಾಗಾಗಿ ನನಗ್ಯಾವ ಭೀತಿಯೂ ಇಲ್ಲ” ಎಂದಿದ್ದಾರೆ.