Advertisement

ಪಿಂಚಣಿ ಬಾಕಿ ಹಣಕ್ಕಾಗಿ ಸರಣಿ ಪ್ರತಿಭಟನೆಗೆ ಬಿಜೆಪಿ ನಿರ್ಧಾರ

01:00 PM Sep 22, 2017 | |

ಹುಬ್ಬಳ್ಳಿ: ಮಹಾನಗರ ಪಾಲಿಕೆಗೆ ಬರಬೇಕಾದ ಪಿಂಚಣಿ ಬಾಕಿ ಹಣ ತರುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ವಿಫ‌ಲವಾಗಿದ್ದು, ಸೆ.25ರ ನಂತರ ಅವರ ನಿವಾಸ ಹಾಗೂ ಪಾಲಿಕೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿ ತಿಳಿಸಿದರು. 

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಗೆ 107 ಕೋಟಿ ರೂ. ಪಿಂಚಣಿ ಹಣ ಸರಕಾರದಿಂದ ಬರಬೇಕಾಗಿದೆ. ಬೇರೆ ಯೋಜನೆಗಳಿಗೆ ಮೀಸಲಿರಿಸಿದ್ದ ಹಣವನ್ನೇ ಪಾಲಿಕೆ ನಿವೃತ್ತ ನೌಕರರಿಗೆ ನೀಡಿದ್ದು, ಇದರಿಂದಾಗಿ ಅಭಿವೃದ್ಧಿ ಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದರು. 

ಪಿಂಚಣಿ ಹಣ ನೀಡುವ ಕುರಿತು ಸಾಕಷ್ಟು ಹೋರಾಟ ಮಾಡಿದ್ದರೂ ಸರಕಾರ ಎಚ್ಚೆತ್ತುಕೊಂಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ ಹಲವು ಬಾರಿ ಒತ್ತಾಯಿಸಲಾಗಿದೆ. ಪಿಂಚಣಿ ಹಣ ತಂದರೆ ಪಕ್ಷದಿಂದ ಸನ್ಮಾನ ಮಾಡಲಾಗುವುದೆಂದು ಸಹ ಘೋಷಿಸಲಾಗಿತ್ತು.

ಆದರೆ ಮಹಾನಗರದ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವರು ಕಿಂಚಿತ್ತು ತಲೆಕೆಡಿಸಿಕೊಂಡಿಲ್ಲ. ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಇವರಿಂದ ಆಗಿಲ್ಲ. ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದ್ದು, ಸೆ.25ರಂದು ಪಂಡೀತ ದೀನದಯಾಳ ಅವರ ಜನ್ಮ ಶತಮಾನೋತ್ಸವದ ಸಭೆ ನಡೆಯಲಿದ್ದು, ಸಭೆಯಲ್ಲಿ ಚರ್ಚಿಸಿದ ನಂತರ ಪ್ರತಿಯೊಂದು ಮೋರ್ಚಾದಿಂದ ನಿತ್ಯವೂ ಹೋರಾಟ ಹಮ್ಮಿಕೊಳ್ಳಲಿದ್ದೇವೆ ಎಂದು ತಿಳಿಸಿದರು.

ಪಾಲಿಕೆ ಆಯುಕ್ತರು ಕೂಡ ನಗರದ ಅಭಿವೃದ್ಧಿ ವಿಚಾರದಲ್ಲಿ ಸ್ಪಂದಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಮಳೆಯಿಂದ ನಿರ್ಮಾಣವಾಗಿರುವ ಪ್ರಮುಖ ರಸ್ತೆ ಹಾಗೂ ಒಳ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು ಆಗುತ್ತಿಲ್ಲ. ಪ್ರತಿಯೊಂದಕ್ಕೂ ಅಡ್ಡಗಾಲು ಹಾಕುತ್ತಿದ್ದಾರೆ.

Advertisement

ಸಣ್ಣ ಅಭಿವೃದ್ಧಿ ಕಾರ್ಯಗಳು ಕೂಡ ನಡೆಯುತ್ತಿಲ್ಲ. ನಗರದ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ ತೋರುತ್ತಿದ್ದಾರೆಂದು ಆರೋಪಿಸಿದರು. ಇತ್ತೀಚೆಗೆ ಬಾಗಲಕೋಟೆಯಲ್ಲಿ ನಡೆದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಪಾಲಿಕೆ ಸದಸ್ಯ ವೀರಣ್ಣ ಸವಡಿ ಅವರನ್ನು ವಿಧಾನಸಭೆ ಚುನಾವಣೆಗೆ ಹುಬ್ಬಳ್ಳಿ-ಧಾರವಾಡದ ಸಂಚಾಲಕರನ್ನಾಗಿ ಆಯ್ಕೆ ಮಾಡಿದೆ ಎಂದು ತಿಳಿಸಿದರು.

ಮುಖಂಡರಾದ ಮಹೇಶ ಟೆಂಗಿನಕಾಯಿ, ದತ್ತಮೂರ್ತಿ ಕುಲಕರ್ಣಿ, ಸತೀಶ ಶೇಜವಾಡಕರ, ತಿಪ್ಪಣ್ಣ ಮಜ್ಜಗಿ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಶಿವಾನಂದ ಮುತ್ತಣ್ಣವರ, ಮಹೇಶ ಬುರ್ಲಿ, ಶಿವು ಮೆಣಸಿನಕಾಯಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next