ಕುಳಗೇರಿ ಕ್ರಾಸ್ (ಬಾಗಲಕೋಟೆ): ಸಮಾಜದಲ್ಲಿ ಅಶಾಂತಿ ಉಂಟು ಮಾಡಲು, ಸಾಮರಸ್ಯ ಹಾಳು ಮಾಡಲು ಹಾಗೂ ಮತ ಗಿಟ್ಟಿಸಿಕೊಳ್ಳಲು ಬಿಜೆಪಿಗರು ವಿವಿಧ ವಿವಾದ ಹುಟ್ಟು ಹಾಕುತ್ತಾರೆ ಎಂದು ಮಾಜಿ ಸಿಎಂ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಬಾದಾಮಿ ತಾಲೂಕಿನ ಆಲೂರ ಎಸ್.ಕೆ. ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ ಖೈದಾ ಮುಖಂಡೆ, ಮಂಡ್ಯ ಯುವತಿ ಅಲ್ಲಾ ಹೋ ಅಕºರ್ ಹೇಳಿಕೆಗೆ ಬೆಂಬಲ ನೀಡಿರುವ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಲ್ಲ, ಅದನ್ನೆಲ್ಲ ಬಿಜೆಪಿಗರೇ ಹುಟ್ಟು ಹಾಕುತ್ತಾರೆ. ಎಲ್ಲಿ ರಿ.. ಉಗ್ರ, ಯಾರು ಉಗ್ರ? ಎಂದು ಪ್ರಶ್ನಿಸಿದರು.
ಇದನ್ನೆಲ್ಲ ಆರೆಸ್ಸೆಸ್‌ನವರೇ ಕಳುಹಿಸೋದು, ಸಮಾಜದಲ್ಲಿ ಅಶಾಂತಿ ಉಂಟು ಮಾಡಲು, ಸಾಮರಸ್ಯ ಹಾಳು ಮಾಡಲು, ಮತ ಪಡೆಯಲು ಇಂತಹ ವಿವಾದ ಹುಟ್ಟು ಹಾಕುತ್ತಾರೆ ಎಂದು ಆರೋಪಿಸಿದರು.
ಚಂದ್ರು ಹತ್ಯೆ ಪ್ರಕರಣ ಸಂಬಂಧ ಮಾಹಿತಿ ಇಲ್ಲ ಎಂದ ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಿಎಂ ಬಳಿ ಇಂಟಿಲಿಜನ್ಸಿ ಇಲ್ಲವೇನ್ರಿ. ಬೆಳಗ್ಗೆ ಸಾಯಂಕಾಲ ಇವರಿಗೆ ಇಂಟಲಿಜನ್ಸಿ ಮಾಹಿತಿ ನೀಡೋದಿಲ್ವಾ? ಎಂದು ಪ್ರಶ್ನಿಸಿದ ಅವರು, ಇಂಟಲಿಜೆನ್ಸಿ ನೇರವಾಗಿಯೇ ಸಿಎಂ ಬಳಿಯೇ ಇದೆ. ಸಿಎಂಗೆ ಮಾಹಿತಿಯೇ ಇಲ್ಲ ಅಂದ್ರೆ ಏನು ಹೇಳಬೇಕು. ಯಾರೇ ತಪ್ಪು ಮಾಡಿದ್ರೂ ಶಿಕ್ಷೆಯಾಗಬೇಕು. ನಾನು ಮಾಡಲಿ, ನೀವು ಮಾಡಲಿ, ಯಾವ ಧರ್ಮದವರೇ ಮಾಡಲಿ ಶಿಕ್ಷೆಯಾಗಬೇಕು. ನಾನು ಯಾವ ಧರ್ಮದ ಪರವೂ ಮಾತನಾಡೋದಿಲ್ಲ. ಯಾರು ಮಾಡಿದ್ರೂ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಗೃಹ ಸಚಿವರು ಇಲಾಖೆ ನಿರ್ವಹಿಸಲು ಅಸಮರ್ಥರು. ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಸರಿಯಾಗಿ ಮಾಹಿತಿ ಇಲ್ಲದೇ ಹೇಳಿಕೆ ಕೊಟ್ಟುಬಿಡುತ್ತಾರೆ. ಒಬ್ಬ ಹೋಂ ಮಿನಿಸ್ಟರ್ ಆದವರು ಸರಿಯಾಗಿ ಮಾಹಿತಿ ತೆಗೆದುಕೊಂಡು ಹೇಳಬೇಕು. ಇವರ ತಲೆಯಲ್ಲಿ ಕೋಮುವಾದ ವಿಚಾರ ತುಂಬಿಕೊಂಡಿದೆ. ಒಬ್ಬ ಹಿಂದೂ ಹುಡುಗ ಮೃತಪಟ್ಟಿದ್ದಾನೆ. ಅದು ಆಕ್ಸಿಡೆಂಟ್ ಆಗಿ ಸತ್ತಿರೋದು ಅಂತ ಪೊಲೀಸ್ ವರದಿ ಇದೆ. ಇವರು ಚಾಕು ತಗೊಂಡು ಚುಚ್ಚಿದ್ರು ಅಂತ ಹೇಳುತ್ತಿದ್ದಾರೆ.ಜನರಿಗೆ ಯಾವ ರೀತಿ ಪ್ರಮೋಟ್ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಹಿಜಾಬ್, ಹಲಾಲ್, ಮಾವಿನ ಹಣ್ಣು, ಭಗವದ್ಗೀತೆ ವಿಚಾರ, ಈಗ ಮಸೀದಿಯಲ್ಲಿ ಮೈಕ್ ವಿಚಾರ ಹೀಗೆ ಇವೆಲ್ಲ ಸಿಲ್ಲಿ ವಿಚಾರ. ಧಾರ್ಮಿಕ ವಿಚಾರ ಮಾಡಿ ಜನರ ತಲೆಗೆ ದ್ವೇಷದ ವಿಚಾರ ತುಂಬುವ ಕೆಲಸ ಮಾಡ್ತಿದ್ದಾರೆ. ಇವರು ಅಧಿಕಾರದಲ್ಲಿ ಇರೋಕೆ ಲಾಯಕ್ ಇಲ್ಲ ಎಂದರು.