ದೊಡ್ಡಬಳ್ಳಾಪುರ: ಬಿಜೆಪಿ ಪಕ್ಷದ ಆಡಳಿತದಿಂದ ದೇಶಾದ್ಯಂತ ವಿವಿಧ ಕಾರ್ಮಿಕ ವಿರೋಧಿ ನೀತಿಗಳಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಕಾರ್ಖಾನೆ ಮುಚ್ಚಿ ಹೋಗಿವೆ. ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ಕಾರ್ಮಿಕರನ್ನು ಬೀದಿಗೆ ತಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಮಿಕ ಘಟಕ ರಾಜ್ಯ ಅಧ್ಯಕ್ಷ ಪುಟ್ಟಸ್ವಾಮಿಗೌಡ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕಾಂಗ್ರೆಸ್ ಕಾರ್ಮಿಕ ಘಟಕದ ತಾಲೂಕು, ನಗರ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ಮುಖಂಡರು 8 ವರ್ಷದಿಂದ ದೇಶದ ಬಡವರಿಗೆ ಅಚ್ಛೇ ದಿನ್ ಸುಳ್ಳು ಘೋಷಣೆಯ ಹೇಳುತ್ತಲೇ ದೇಶದ ಜನತೆಗೆ ನೀಡಿದ್ದ ಭರವಸೆಯನ್ನು ಹುಸಿಗೊಳಿಸಿದ್ದಾರೆ.
ಬಿಜೆಪಿ ಮಾಲೀಕರ ಪರವಾದ ಕಾನೂನು ಜಾರಿಗೆ ತಂದಿದೆ ಹೊರತು, ಕಾರ್ಮಿಕರಿಗೆ ವರವಾದ ಕಾನೂನು ಜಾರಿಗೆ ಬಂದಿಲ್ಲ. ಭಾವನಾತ್ಮಕ ವಿಚಾರವನ್ನು ಹೇಳಿ ದೇಶದ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದರು.
ಮತದಾರರ ಪಟ್ಟಿ ಪರಿಶೀಲಿಸಿ: ಶಾಸಕ ವೆಂಕಟರಮಣಯ್ಯ ಮಾತನಾಡಿ, ತಾಲೂಕಿನಲ್ಲೂ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಜನರ ಹೆಸರು ನಾಪತ್ತೆಯಾಗುವ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ಸದಸ್ಯರ ಹೆಸರು ಬೇರೆ ಬೇರೆ ವಾರ್ಡ್‌ಗಳ ಮತದಾರರ ಪಟ್ಟಿಗೆ ಯಾವ ಆಧಾರದ ಮೇಲೆ ಸೇರ್ಪಡೆಗೊಂಡಿವೆ ಎನ್ನುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು.
ಜನತೆಗೆ ಉದ್ಯೋಗ ನೀಡಿಲ್ಲ: ಕೆಎಂಎಫ್ ನಿರ್ದೇಶಕ ಬಿ.ಸಿ. ಆನಂದ್‌ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಅನೇಕ ಕೈಗಾರಿಕಾಗಳು ಇವೆ. ಆದರೆ, ಕೈಗಾರಿಕೆ ನಮ್ಮ ತಾಲೂಕಿನ ಜನತೆಗೆ ಉದ್ಯೋಗ ನೀಡಿಲ್ಲ. ಕಾರ್ಮಿಕ ಸಂಘಟನೆಗಳು ಸ್ಥಳೀಯರಿಗೆ ಉದ್ಯೋಗ ಕೊಡಿಸುವಲ್ಲಿ ಶ್ರಮಿಸಬೇಕು. ಪದಾಧಿಕಾರಿಗಳು ಕೇವಲ ವಿಸಿಟಿಂಗ್ ಕಾರ್ಡ್‌ಗೆ ಸಿಮೀತಗೊಳ್ಳದೆ ಕೆಲಸ ಮಾಡಬೇಕು ಎಂದರು. ಕೆಪಿಸಿಸಿ ಮಾಧ್ಯಮ ಸಂಯೋಜಕ ಜಿ.ಲಕ್ಷ್ಮೀಪತಿ, ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ ಚಂದ್ದೇಗೌಡ, ಪ್ರಧಾನ ಕಾರ್ಯದರ್ಶಿ ಯೋಗಾನಂದ, ರಾಮಮೂರ್ತಿ, ಕೆಪಿಸಿಸಿ ಸದಸ್ಯ ಬಿ.ಜಿ.ಹೇಮಂತರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಚುಂಚೇಗೌಡ, ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎಂ.ಭೈರೇಗೌಡ, ಕಸಬಾ ಬ್ಲಾಕ್ ಅಧ್ಯಕ್ಷ ಅಪ್ಪಿ ವೆಂಕಟೇಶ, ನಗರ ಬ್ಲಾಕ್ ಅಧ್ಯಕ್ಷ ಕೆ.ಪಿ ಜಗನ್ನಾಥ, ಬಷೀರ್, ಮಹೇಶ್, ಶಂಕರ್, ರಾಮು ಇದ್ದರು.