ಕಲಬುರಗಿ: ಲೋಕಸಭಾ ಚುನಾವಣೆಯ ಮೊದಲ ಎರಡು ಹಂತಗಳ ಚುನಾವಣೆಯಲ್ಲಿ ಬಿಜೆಪಿ ವರ್ಚಸ್ಸು ಕುಸಿದಿದೆ ಎಂಬುದು ಗೊತ್ತಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ದ್ವೇಷ ಭಾಷಣಗಳನ್ನು ಮಾಡುತ್ತಿದ್ದಾರೆ. ಪ್ರಧಾನಿಗೆ ಶೋಭೆ ತರುವಂತಹದ್ದಲ್ಲ ಎಂದು ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್ ಟೀಕಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ 2 ಹಂತಗಳ ಚುನಾವಣೆಯಲ್ಲಿ ‘ಮೋದಿ ಪೋಲ್ ಕೋಲ್’ (ಗುಟ್ಟು ರಟ್ಟಾಗಿದೆ) ಎಂದು ವ್ಯಂಗ್ಯವಾಡಿದರು.
ಮುಸ್ಲಿಮರ ವಿರುದ್ಧ ಕಿಡಿಕಾರಿದರೆ ಮಾತ್ರ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು ಎಂದು ನಾಗಪುರದ ಆರ್.ಎಸ್.ಎಸ್ ಮುಖಂಡರು ಹೇಳಿಕೊಟ್ಟಂತೆಯೇ ಮೋದಿ ಭಾಷಣ ಮಾಡುತ್ತಿದ್ದಾರೆ. ಸೋಲಿನ ಆತಂಕದಿಂದ ಅವರು ಹೀಗೆ ಆಯತಪ್ಪಿ ಮಾತನಾಡುತ್ತಿದ್ದಾರೆ ಎಂದರು. ಬಿಜೆಪಿಯ ಮೂಲ ಅಜಂಡಾ ಮುಸ್ಲಿಂರನ್ನು ಟೀಕಿಸಿದರೆ, ಮತ ಪಡೆಯಬಹುದು ಎನ್ನುವ ಲೆಕ್ಕಾಚಾರ ಕ್ಕೆ ಬಂದಿದ್ದಾರೆ ಎಂದರು.
ಪ್ರಧಾನಿ ಮೋದಿ ಜನರು ಎಂದುಕೊಂಡಷ್ಟು ಸಿಂಪಲ್ ಜೀವನ ನಡೆಸಲ್ಲ. ಅದೆಲ್ಲಾ ತೋರಿಕೆಯ ಜೀವನ. ವಾಸ್ತವದಲ್ಲಿ ಐಷಾರಾಮಿ ಜೀವನಕ್ಕೆ ಒಗ್ಗಿ ಹೋಗಿದ್ದಾರೆ. ಐತಿಹಾಸಿಕ ಪಾರ್ಲಿಮೆಂಟ್ ಭವನ ಇದ್ದಾಗ್ಯೂ 25 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೊಸ ಸಂಸತ್ ಭವನ ಕಟ್ಟಿಸಿದ್ದಾರೆ. 82 ಕೋಟಿ ರೂ. ಬೆಲೆಯ ಬುಲೆಟ್ ಪ್ರೂಫ್ ಕಾರು ಖರೀದಿಸಿದ್ದಾರೆ. ತಲಾ ರೂ.8500 ಕೋಟಿ ದರದಲ್ಲಿ ಎರಡು ವಿಮಾನಗಳನ್ನು ತಮಗಾಗಿ ಖರೀದಿಸಿದ್ದಾರೆ. ಪ್ರಧಾನಿ ತಮ್ಮ ಜೇಬಿನಲ್ಲಿ ಎರಡುವರೆ ಲಕ್ಷ ಮೌಲ್ಯದ ಪೆನ್ ಇಡುತ್ತಾರೆ. ಒಂದುವರೆ ಲಕ್ಷ ರೂ. ಮೌಲ್ಯದ ಕನ್ನಡಕ ಧರಿಸುತ್ತಾರೆ. ಇಷ್ಟೆಲ್ಲಾ ಢೋಂಗಿ ಜೀವನ ನಡೆಸುತ್ತಾ ಪ್ರಧಾನಿ ಮೋದಿ ಈ ದೇಶದ ಜನರಿಗೆ ಮೋಸ ಮಾಡುತ್ತಿದ್ದಾರೆ. ಹೀಗಾಗಿ ದೇಶದ ಜನರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ನಿರ್ಧರಿಸಿದ್ದಾರೆ ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ ಮಾತನಾಡಿ, ದೇಶದಲ್ಲಿ ಮುಸ್ಲಿಮರ ಮೀಸಲಾತಿ ಕಿತ್ತುಕೊಂಡು ಹಿಂದುಳಿದ ವರ್ಗಗಳಿಗೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ಸುಳ್ಳು ಹೇಳುವ ಮಾನಸಿಕ ರೋಗ ಅಂಟಿಕೊಂಡಿದೆ ಎಂದರು.
ಈ ವೇಳೆಯಲ್ಲಿ ಕಾಂಗ್ರೆಸ್ ಯುವ ನಾಯಕ ಚೇತನಗೌಡ ಗೋನಾಯಕ್, ಲಿಂಗರಾಜ ತಾರಫೈಲ್ ಇದ್ದರು.