Advertisement

BJP ಬಸನಗೌಡ ಪಾಟೀಲ್‌ ಯತ್ನಾಳ್‌ ದಿಲ್ಲಿಗೆ: ವಿಜಯೇಂದ್ರರಿಗೂ ಬುಲಾವ್‌

11:14 PM Dec 18, 2023 | Team Udayavani |

ಬೆಂಗಳೂರು: ಬಿಜೆಪಿ ರಾಜ್ಯ ನಾಯಕತ್ವದ ವಿರುದ್ಧ ಬುಸುಗುಡುತ್ತಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ದಿಲ್ಲಿಗೆ ತೆರಳಿದ್ದು, ರಾಷ್ಟ್ರೀಯ ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಇದರ ಮಧ್ಯೆ ಬಿಜೆಪಿ ವರಿಷ್ಠರು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೂ ದಿಲ್ಲಿಗೆ ಬರುವಂತೆ ಬುಲಾವ್‌ ನೀಡಿದೆ.

Advertisement

ಡಿ.21ರಂದು ದಿಲ್ಲಿಗೆ ಬರುವಂತೆ ಹೈಕಮಾಂಡ್‌ ವಿಜಯೇಂದ್ರಗೆ ಸೂಚನೆ ನೀಡಿದ್ದು, ಡಿ.23ರ ವರೆಗೆ ಅವರು ದಿಲ್ಲಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಎಲ್ಲ ರಾಜ್ಯ ಘಟಕಗಳ ಅಧ್ಯಕ್ಷರ ಜತೆಗೆ ವರಿಷ್ಠರು ಚಿಂತನ-ಮಂಥನ ನಡೆಸಲಿದ್ದು, ರಾಜ್ಯಾಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ರಾಷ್ಟ್ರಮಟ್ಟದ ಮಹತ್ವದ ಸಭೆಯಲ್ಲಿ ವಿಜಯೇಂದ್ರ ಭಾಗಿಯಾಗುತ್ತಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆಗೆ ವಿಜಯೇಂದ್ರ ಮನವಿ ಮಾಡಲಿದ್ದು, ಜ. 15ರೊಳಗಾಗಿ ಸಂಪೂರ್ಣ ಹೊಸ ತಂಡದೊಂದಿಗೆ ಕಾರ್ಯಾಚರಣೆಗೆ ಇಳಿಯಲು ಅವಕಾಶ ಕಲ್ಪಿಸುವಂತೆ ವರಿಷ್ಠರಿಗೆ ಮನವಿ ಮಾಡಲಿದ್ದಾರೆಂದು ತಿಳಿದು ಬಂದಿದೆ. ಈಗಿರುವ ತಂಡ ನಾಲ್ಕೂವರೆ ವರ್ಷಗಳಿಂದ ಪಕ್ಷದ ಜವಾಬ್ದಾರಿ ನಿರ್ವಹಿಸಿದೆ. ಹೀಗಾಗಿ ಹೊಸಬರು ಬಂದರೆ ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯ ಎಂದು ವರಿಷ್ಠರ ಮನವೊಲಿಸಲು ವಿಜಯೇಂದ್ರ ಮುಂದಾಗಿದ್ದಾರೆ.

ಯತ್ನಾಳ್‌ ಕತೆ ಏನು?
ಇವೆಲ್ಲದರ ಮಧ್ಯೆ ಬಸನಗೌಡ ಪಾಟೀಲ್‌ ಯತ್ನಾಳ್‌ ದಿಲ್ಲಿ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ಉತ್ತರ ಕನ್ನಡ ಸಂಸದ ಅನಂತ ಕುಮಾರ್‌ ಹೆಗಡೆಯವರನ್ನು ಹುಬ್ಬಳ್ಳಿಯಲ್ಲಿ ಭೇಟಿ ಮಾಡಿರುವ ಯತ್ನಾಳ್‌, ಅವರ ಜತೆಯಲ್ಲೇ ದಿಲ್ಲಿಗೆ ತೆರಳಿದ್ದಾರೆ. ಇವರಿಬ್ಬರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಆದರೆ ದಿಲ್ಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಯತ್ನಾಳ್‌ ನಾನು ವೈಯಕ್ತಿಕ ಕೆಲಸಕ್ಕಾಗಿ ಬಂದಿದ್ದೇನೆ. ವರಿಷ್ಠರು ನನಗೆ ಬುಲಾವ್‌ ನೀಡಿಲ್ಲ. ಅವಕಾಶ ದೊರೆತರೆ ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ರಾಜ್ಯ ಘಟಕದ ವಿರುದ್ಧ ಮಾತನಾಡುತ್ತಿರುವ ಯತ್ನಾಳ್‌ ಅವರನ್ನು ಸುಮ್ಮನಾಗಿಸುವುದು ಹೇಗೆ ಎಂಬ ಪ್ರಶ್ನೆ ವರಿಷ್ಠರನ್ನೂ ಕಾಡುತ್ತಿದೆ. ಹೀಗಾಗಿ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡುವ ಸಾಧ್ಯತೆ ಇದೆ. ಒಟ್ಟಾರೆ ಯತ್ನಾಳ್‌ ವಿಚಾರದಲ್ಲಿ ವರಿಷ್ಠರುನಡೆ ಇನ್ನೂ ಮಗುಮ್ಮಾಗಿಯೇ ಇದೆ.

Advertisement

ಸೋಮಣ್ಣ ಭೇಟಿ ಮಾಡಿದ ರೋಶನ್‌ ಬೇಗ್‌
ಮಾಜಿ ಸಚಿವ ಆರ್‌.ರೋಶನ್‌ ಬೇಗ್‌ ಅವರು ಬಿಜೆಪಿಯ ಇನ್ನೊಬ್ಬ ರೆಬೆಲ್‌ ನಾಯಕ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಮಂಗಳವಾರ ಸೋಮಣ್ಣ ದಿಲ್ಲಿಗೆ ತೆರಳಲು ಸಿದ್ಧತೆ ನಡೆಸಿರುವಾಗಲೇ ಈ ಭೇಟಿ ನಡೆದಿದೆ. ಆದರೆ ಯಾವುದೇ ರಾಜಕೀಯ ಉದ್ದೇಶವಿಟ್ಟುಕೊಂಡು ನಾನು ಅವರನ್ನು ಭೇಟಿ ಮಾಡಿಲ್ಲ ಎಂದು ಬೇಗ್‌ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next