ಮುಂಬಯಿ : 2019 ರಲ್ಲಿ ತನ್ನ ಸಹೋದರನ ಪುತ್ರ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರೊಂದಿಗೆ ಸರಕಾರ ರಚಿಸುವ ಬಿಜೆಪಿಯ ಪ್ರಯತ್ನವು ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಕೊನೆಗೊಳಿಸಿದ ಒಂದು ಪ್ರಯೋಜನವನ್ನು ಹೊಂದಿತ್ತು ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಬುಧವಾರ ಹೇಳಿದ್ದಾರೆ.
ಪಿಂಪ್ರಿ ಚಿಂಚ್ವಾಡ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪವಾರ್, ಆ ಕಸರತ್ತು ನಡೆಯದಿದ್ದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಮುಂದುವರಿಯುತ್ತಿತ್ತು. ಆ ಬಳಿಕ ಏನಾಯಿತು ಎಂದು ಮಹಾರಾಷ್ಟ್ರದ ಜನತೆಗೆ ತಿಳಿದಿದೆ ಎಂದು ಹೇಳಿಕೆ ನೀಡಿದ್ದಾರೆ.
ಅಂತಹ ಸರ್ಕಾರ ರಚನೆಯ ಬಗ್ಗೆ ನಿಮಗೆ ತಿಳಿದಿತ್ತೆ ಮತ್ತು ಅಜಿತ್ ಪವಾರ್ ಈ ವಿಷಯದ ಬಗ್ಗೆ ಏಕೆ ಮೌನವಾಗಿದ್ದಾರೆ ಎಂದು ಕೇಳಿದಾಗ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅದರ ಬಗ್ಗೆ ಈಗ ಮಾತನಾಡುವ ಅಗತ್ಯವಿದೆಯೇ. ಈ ರೀತಿಯ ಕಸರತ್ತು ನಡೆಯದಿದ್ದರೆ ರಾಷ್ಟ್ರಪತಿ ಆಳ್ವಿಕೆಯನ್ನು ತೆಗೆದುಹಾಕಲಾಗುತ್ತಿತ್ತೇ? ರಾಷ್ಟ್ರಪತಿ ಆಳ್ವಿಕೆಯನ್ನು ಹಿಂತೆಗೆದುಕೊಳ್ಳದಿದ್ದರೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೇ? ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ಮಹಾರಾಷ್ಟ್ರದ ಅತಿದೊಡ್ಡ ರಾಜಕೀಯ ಅಚ್ಚರಿಯೆಂದರೆ, ನವೆಂಬರ್ 23, 2019 ರಂದು ಮುಂಜಾನೆ ನಡೆದ ಸಮಾರಂಭದಲ್ಲಿ ಅಂದಿನ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ ಮತ್ತು ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಸರಕಾರ ಕೇವಲ ಮೂರು ದಿನಗಳ ಕಾಲ ಉಳಿಯಿತು, ನಂತರ ಉದ್ಧವ್ ಠಾಕ್ರೆ ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.