Advertisement

ನೂರು ದಿನದಲ್ಲಿ ಬಿಜೆಪಿ ಸಾಧನೆ ಶೂನ್ಯ: ಸಿದ್ದರಾಮಯ್ಯ

08:31 AM Nov 02, 2019 | Team Udayavani |

ಬೆಂಗಳೂರು: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ನೂರು ದಿನದ ಸಾಧನೆ ಶೂನ್ಯ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಪ್ರಸ್‌ ಕ್ಲಬ್‌ ಆಫ್ ಬೆಂಗಳೂರು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಧಿಕಾರಿಗಳ ವರ್ಗಾವಣೆ ಮಾಡಿರುವುದೇ ದೊಡ್ಡ ಸಾಧನೆ. ಒಂದು ವರ್ಷ ಅದೇ ಅಧಿಕಾರಿಗಳು ಕೆಲಸ ಮಾಡಿದ್ದರೆ ಆಡಳಿತ ಯಂತ್ರಕ್ಕೇನು ತುಕ್ಕು ಹಿಡಿಯುತ್ತಿತ್ತಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 17 ಶಾಸಕರ ರಾಜೀನಾಮೆ ಕೊಡಿಸಿ ಅಧಿಕಾರಕ್ಕೆ ಬಂದಿರುವುದು, ಅನರ್ಹ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ, ಕಾಂಗ್ರೆಸ್‌ ಶಾಸಕರ ಕ್ಷೇತ್ರದ ಅನುದಾನ ಕಡಿತ ಮಾಡಿರುವುದು ಬಿಜೆಪಿಯ 100 ದಿನದ ಸಾಧನೆಯಾಗಿದೆ ಎಂದರು.

ರಾಜ್ಯದಲ್ಲಿ ಇರುವುದು ಅನೈತಿಕ ಸರ್ಕಾರ. ಉಪ ಚುನಾವಣೆಯಲ್ಲಿ ಬಿಜೆಪಿ 7 ಸ್ಥಾನ ಗೆಲ್ಲದೇ ಹೋದರೆ ರಾಜ್ಯದ ರಾಜಕೀಯ ಪರಿಸ್ಥಿತಿ ಬದಲಾಗುತ್ತದೆ. ಹೀಗಾಗಿ, ಅವರು ರಾಜೀನಾಮೆ ನೀಡಬೇಕಾಗುತ್ತದೆ. ಆಗ ಚುನಾವಣೆ ಬರುತ್ತದೆ ಎಂದು ಹೇಳಿ¨ªೆ. ಅದಕ್ಕೆ ಅನೇಕ ವ್ಯಾಖ್ಯಾನಗಳನ್ನು ಮಾಡಲಾಯಿತು. ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ಯಾವುದು ಸರಿ?:
ರಾಜ್ಯ ಸರ್ಕಾರ ಪ್ರವಾಹದಿಂದ ಆಗಿರುವ ಹಾನಿಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ 2.47 ಲಕ್ಷ ಮನೆ ಹಾನಿಯಾಗಿದೆ ಎಂದು ಹೇಳಿದೆ. ನಾನು ಆರೋಪ ಮಾಡಿದ ಮೇಲೆ ಮಾಧ್ಯಮಗಳಿಗೆ ಜಾಹಿರಾತು ನೀಡಿ 97 ಸಾವಿರ ಮನೆಗಳು ಬಿದ್ದಿವೆ ಎಂದು ಹೇಳಿದ್ದಾರೆ. ಇದರಲ್ಲಿ ಯಾವುದು ಸರಿ ಎಂದು ಪ್ರಶ್ನಿಸಿದರು.

Advertisement

ನೇಕಾರರ ಕುಟುಂಬಗಳಿಗೆ ಪ್ರತಿ ಮಗ್ಗಕ್ಕೂ 25 ಸಾವಿರ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದರು. ರಾಜ್ಯದಲ್ಲಿ 18 ಸಾವಿರ ಮಗ್ಗಗಳು ಹಾನಿಯಾಗಿವೆ. ಈಗ ಆದೇಶ ಬದಲಾಯಿಸಿ ಎಷ್ಟೇ ಮಗ್ಗಗಳು ಹಾನಿಯಾದರೂ 25 ಸಾವಿರ ನೀಡುತ್ತಿದ್ದಾರೆ. ಇದುವರೆಗೂ ಯಾವುದೇ ಬೆಳೆ ಪರಿಹಾರ ನೀಡಿಲ್ಲ. ಯಡಿಯೂರಪ್ಪ ಯಾರಿಗಾದರೂ ಒಂದು ರೂ. ಬೆಳೆ ಪರಿಹಾರ ಕೊಟ್ಟಿದ್ದೇವೆ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.

ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದರೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತಿಲ್ಲ. ಯಾಕೆ ಈ ಅಸಡ್ಡೆ ಎಂದು ಕೇಳಬೇಕಲ್ಲಾ?. ರಾಜ್ಯದಿಂದ 25 ಸಂಸದರನ್ನು ಕಳುಹಿಸಿದ್ದೇವೆ ಅವರಾರೂ ಪ್ರಧಾನಿ ಭೇಟಿ ಮಾಡಿ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡುವ ಧೈರ್ಯ ತೋರುವ ಪ್ರಯತ್ನ ಮಾಡಿಲ್ಲ. ಮುಖ್ಯಮಂತ್ರಿಗೆ ಪ್ರಧಾನಿ ಭೇಟಿ ಮಾಡಲು ಅವಕಾಶವೇ ಸಿಕ್ಕಿಲ್ಲ. ಅದಕ್ಕೆ ಯಡಿಯೂರಪ್ಪ “ವೀಕೆಸ್ಟ್‌ ಮುಖ್ಯಮಂತ್ರಿ’ ಎಂದು ಹೇಳಿದ್ದೇನೆ ಎಂದು ಹೇಳಿದರು.

ಹೆಚ್ಚು ಸ್ಥಾನ ಗೆಲ್ಲುತ್ತೇವೆ:
15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಕನಿಷ್ಠ 12 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇದೆ. ಅನರ್ಹ ಶಾಸಕರ ಕುರಿತು ಸುಪೀಂ ಕೋರ್ಟ್‌ ತೀರ್ಪು ನೋಡಿಕೊಂಡು ಪ್ರಚಾರ ಕಾರ್ಯವನ್ನು ಚುರುಕುಗೊಳಿಸುತ್ತೇವೆ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪಕ್ಷದಲ್ಲಿ ಡಿ.ಕೆ. ಶಿವಕುಮಾರ್‌ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪಕ್ಷದ ಯಾವ ನಾಯಕರ ನಡುವೆಯೂ ಭಿನ್ನಾಭಿಪ್ರಾಯ ಇಲ್ಲ. ಎಲ್ಲ ಕ್ಷೇತ್ರಗಳಿಗೂ ವೀಕ್ಷಕರನ್ನು ಕಳುಹಿಸಿ ಅವರ ಅಭಿಪ್ರಾಯ ಪಡೆದುಕೊಂಡು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅಭ್ಯರ್ಥಿಗಳ ಆಯ್ಕೆಗೆ ಶಿಫಾರಸು ಮಾಡಿದ್ದಾರೆ ಎಂದು ಹೇಳಿದರು.

800 ಕೋಟಿ ರೂ. ಹಾಲಿನ ಬಾಕಿ ಕೊಟ್ಟಿಲ್ಲ:
ಕೇಂದ್ರ ಸರ್ಕಾರ ಮುಕ್ತ ಆರ್ಥಿಕ ಒಪ್ಪಂದದ ಮೂಲಕ ವಿದೇಶಿ ಹಾಲನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಲು ಮುಂದಾಗಿದೆ. ಇದರಿಂದ ದೇಶದ ಸುಮಾರು 10 ಕೋಟಿ ರೈತರು, ರಾಜ್ಯದಲ್ಲಿ ಸುಮಾರು 1.5 ಕೋಟಿ ಜನ ಉದ್ಯೋಗ ವಂಚಿತರಾಗುತ್ತಾರೆ. ಈ ಬಗ್ಗೆ ಮುಖ್ಯಮಂತ್ರಿ ಕೇಂದ್ರ ಸರ್ಕಾರದ ಗಮನ ಸೆಳೆದು ತಡೆಯುವ ಪ್ರಯತ್ನ ಮಾಡಬೇಕು.

ರಾಜ್ಯದಲ್ಲಿ ಪ್ರತಿದಿನ 80 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಹಾಲಿಗೆ ಪ್ರೋತ್ಸಾಹ ಧನವಾಗಿ 5 ರೂ.ನೀಡಲಾಗಿತ್ತು. ಈ ಸರ್ಕಾರ ಏಪ್ರಿಲ್‌ನಿಂದ ರೈತರಿಗೆ ಸುಮಾರು 800 ಕೋಟಿ ರೂಪಾಯಿ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಟಿಪ್ಪು ಟೋಪಿ ಹಾಕಿಕೊಂಡವರು ಯಾರು ?
ಟಿಪ್ಪು ಸುಲ್ತಾನ್‌ ಕುರಿತಾದ ವಿಷಯವನ್ನು ಪಠ್ಯಪುಸ್ತಕದಿಂದ ತೆಗೆದು ಹಾಕುವುದಾಗಿ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ, ಯಡಿಯೂರಪ್ಪ 2013ರಲ್ಲಿ ಟಿಪ್ಪು ಸುಲ್ತಾನನ ಟೋಪಿ ಹಾಕಿಕೊಂಡು ನಾನೇ ಟಿಪ್ಪು ಎಂದು ಹೇಳಿಕೊಂಡಿದ್ದರು. ಜಗದೀಶ್‌ ಶೆಟ್ಟರ್‌, ಟಿಪ್ಪು ಕುರಿತ ಪುಸ್ತಕಕ್ಕೆ ಮುನ್ನುಡಿ ಬರೆದು, ಟಿಪ್ಪು ಸುಲ್ತಾನನ ಸಾಧನೆಯನ್ನು ಹೊಗಳಿದ್ದಾರೆ. ಗೋವಿಂದ ಕಾರಜೋಳ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾಗ ಟಿಪ್ಪುವಿನ ಬಗ್ಗೆ ಹೊಗಳಿದ್ದಾರೆ. ಆರ್‌.ಅಶೋಕ್‌ ಕೂಡ ಟಿಪ್ಪು ಸುಲ್ತಾನ್‌ನ ಟೋಪಿ ಹಾಕಿಕೊಂಡು ಫೋಟೊ ತೆಗೆಸಿಕೊಂಡಿದ್ದಾರೆ. ಇವರೆಲ್ಲ ಕಾಂಗ್ರೆಸ್‌ ಪಕ್ಷದವರೇ?. ಇತಿಹಾಸ ಬದಲಿಸುವುದು ಬಿಜೆಪಿಯವರ ಜನ್ಮಸಿದ್ದ ಹಕ್ಕಾಗಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next